ಮಾನಹಾನಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

highcourt
Published on

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಬಿಜೆಪಿ ವಿರುದ್ಧ ಸಲ್ಲಿಸಿದ್ದ ಮಾನಹಾನಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರವೆತ್ತಿದ್ದು, ಬಿಜೆಪಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದೆ.

ನಕಲಿ ವೋಟರ್ ಐಡಿ ಕುರಿತಂತೆ ಭಾರತೀಯ ಜನತಾ ಪಕ್ಷ ೨೦೧೯ರ ಟ್ವೀಟ್ ಮಾಡಿತ್ತು. ಆ ಟ್ವೀಟ್‌ನಿಂದ ಮಾನಹಾನಿಯಾಗಿದೆ ಎಂದು ಬಿಜೆಪಿ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ದೂರು ದಾಖಲಿಸಿದ್ದರು. ಈ ಪ್ರಕರಣ ಪ್ರಶ್ನಿಸಿ ಅಂದಿನ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅರ್ಜಿ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್ ರಾಜಕೀಯ ಪಕ್ಷದ ವಿರುದ್ಧ ಕೇಸ್ ಮುಂದುವರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದು, ಕೇಸ್ ರದ್ದುಪಡಿಸಲು ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ನಕಾರವೆತ್ತಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೪೯೯ ಮತ್ತು ೫೦೦ ರಲ್ಲಿ ಮಾನನಷ್ಟ ಪಠ್ಯ ಆಧರಿಸಿ ರಾಜಕೀಯ ಪಕ್ಷದ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇರುವಂತಿಲ್ಲ ಎಂದು ಅರ್ಜಿದಾರರು ವಾದ ಮಂಡಿಸಿದ್ದಾರೆ. ಕಾನೂನಿನ ಮೂಲಕ ಜಾರಿಗೊಳಿಸದ ಹೊರತು ಮತ್ತು ಅಂತಹ ಕ್ರಮವನ್ನು ರಾಜಕೀಯ ಪಕ್ಷದ ವಿರುದ್ಧ ತೆಗೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ.

ರಾಜಕೀಯ ಪಕ್ಷವು ಸಾಮಾಜಿಕ ನೋಂದಣಿ ಕಾಯಿದೆಯಡಿಯಲ್ಲಿ ನೋಂದಾಯಿಸಲ್ಪಟ್ಟ ಒಂದು ಸಾಮಾಜಿಕ ವ್ಯವಸ್ಥೆಯಾಗಿದೆಯೇ ಹೊರತು ಕಂಪನಿಯಲ್ಲ. ಆದ್ದರಿಂದ ಅದು ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಕಾರ್ಪೊರೇಟ್ ಕಾನೂನು ವ್ಯಕ್ತಿತ್ವವನ್ನು ಹೊಂದಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net