ಶಿಕ್ಷಕನ ನೇಮಕಾತಿ ರದ್ದುಗೊಳಿಸಿದ ಸರ್ಕಾರದ ಕ್ರಮಕ್ಕೆ ಹೈ ಅಸಮಾಧಾನ| High court

ಹೈಕೋರ್ಟ್​
ಹೈಕೋರ್ಟ್​
Published on
ಬೆಂಗಳೂರು: ವಿಭಾಗೀಯ ನ್ಯಾಯಪೀಠದ ತೀರ್ಪನ್ನು ಪರಿಗಣಿಸದೇ ಶಿಕ್ಷಕರೊಬ್ಬರ ನೇಮಕಾತಿ ಆದೇಶ ರದ್ದು ಮಾಡಿರುವ ಶಿಕ್ಷಣ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಕ್ರಮವು ನ್ಯಾಯಾಂಗ ನಿಂದನೆಗೆ ಸಮವಾಗಿದೆ ಎಂದು ಹೈಕೋರ್ಟ್​ ಹೇಳಿದೆ. ನ್ಯಾಯಾಲಯದ ಆದೇಶಗಳನ್ನು ಗಾಳಿಗೆ ತೂರುವಂಥ ಯಾವುದೇ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಸರ್ಕಾರಕ್ಕೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಗದಗ ಜಿಲ್ಲೆಯ ನರಗುಂದದ ಪ್ರಭಾಕರ್​ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ  ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಅಭಿಪ್ರಾಯಪಟ್ಟಿದೆ.  
ರೋಣ ತಾಲೂಕಿನ ಮೆಣಸಗಿ ಗ್ರಾಮದ ಶರಣಬಸವೇಶ್ವರ ಅನುದಾನಿತ ಪ್ರೌಡಶಾಲೆಯ ಸಹಾಯಕ ಶಿಕ್ಷಕರ ಹುದ್ದೆಗೆ 2010ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಅದರಲ್ಲಿ ಅರ್ಜಿದಾರರಾದ ಪ್ರಭಾಕರ್​ ಶೇ.77.18 ಅಂಕ ಗಳಿಸಿ ಹುದ್ದೆಗೆ ಆಯ್ಕೆಯಾಗಿದ್ದರು. ಶೇ. 64.5 ಅಂಕ ಗಳಿಸಿದ ಮೆಣಸಗಿಯ ಶರಣಪ್ಪ ಎಂಬುವರು ಈ ಆಯ್ಕೆಯನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಆದರೆ, ಅವರ ಅರ್ಜಿಯನ್ನು 2012ರಲ್ಲಿ ಹೈಕೋರ್ಟ್​ನ ಏಕಸದಸ್ಯ ನ್ಯಾಯಪೀಠ ಮತ್ತು ವಿಭಾಗೀಯ ಪೀಠಗಳೆರಡೂ ವಜಾಗೊಳಿಸಿದ್ದವು. ಪ್ರಭಾಕರ್​ ಅವರ ನೇಮಕಾತಿಯು ಮೆರಿಟ್​ ಆಧಾರದಲ್ಲಿ ನಡೆದಿದೆ. ಆದ್ದರಿಂದ ಅವರ ನೇಮಕಾತಿ ಸರಿಯಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ನ್ಯಾಯಾಲಯದಲ್ಲಿ ಸೋಲನುಭವಿಸಿದ ಬಳಿಕ ಶರಣಪ್ಪ ಶಿಕ್ಷಣ ಇಲಾಖೆಯ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಶರಣಪ್ಪ ಅವರ ಹಿಂದಿನ ಸೇವಾವಧಿಗೆ ವೈಟೇಜ್​ ಅಂಕಗಳನ್ನು ನೀಡಿದ ಮೇಲ್ಮನವಿ ಪ್ರಾಧಿಕಾರವು ಪ್ರಭಾಕರ್​ ಅವರ ನೇಮಕಾತಿಯನ್ನು ರದ್ದುಪಡಿಸಿತ್ತು. ಇದನ್ನು ಪ್ರಭಾಕರ್​ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಭಾಕರ್​ ಅವರ ನೇಮಕಾತಿಯನ್ನು ಎತ್ತಹಿಡಿದಿದ್ದು, ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದೆ. 

ಸರ್ಕಾರದಿಂದ ನ್ಯಾಯಾಂಗ ನಿಂದನೆ:

ಸರ್ಕಾರವು ನೇಮಕಾತಿ ರದ್ದು ಮಾಡುವಾಗ ಸಹಜ ನ್ಯಾಯವನ್ನು ಉಲ್ಲಂಘಿಸಿದೆ. ಪ್ರಭಾಕರ್​ ವಾದವನ್ನು ಆಲಿಸದೆ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಹೈಕೋರ್ಟ್​ನ ವಿಭಾಗೀಯ ನ್ಯಾಯಪೀಠವು ಈಗಾಗಲೆ ದೃಢಪಡಿಸಿದ ನೇಮಕಾತಿಯನ್ನು ತನ್ನ ಅಧಿಕಾರ ವ್ಯಾಪ್ತಿ ಮೀರಿ ರದ್ದುಪಡಿಸಿದೆ. ಇದು ನ್ಯಾಯಾಂಗ ನಿಂದನೆಗೆ ಸಮವಾಗಿದೆ. ಶರಣಪ್ಪ ಅವರಿಗೆ ವೈಟೇಜ್​ ಅಂಕಗಳ ಹಕ್ಕು ಇದ್ದಿದ್ದರೆ ಅದನ್ನು ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗಳಲ್ಲಿ ಪ್ರಸ್ತಾಪಿಸಬೇಕಿತ್ತು. ಬದಲಾಗಿ ಸುತ್ತಿ ಬಳಸಿ ಸರ್ಕಾರದಿಂದ ಆದೇಶ ಪಡೆಯಬಾರದಿತ್ತು ಎಂದು ನ್ಯಾಯಪೀಠ ಹೇಳಿದೆ. 

ಮರುಕಳಿಸಿದರೆ ಕಠಿಣ ಕ್ರಮ 

ನೇಮಕಾತಿ ರದ್ದುಗೊಳಿಸಿದ ಅಧಿಕಾರಿ ಈಗಾಗಲೇ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ದಂಡ ವಿಧಿಸುವುದರಿಂದ ನ್ಯಾಯಾಲಯ ಹಿಂದೆ ಸರಿಯಿತು. ಆದರೆ, ಈ ಬಗ್ಗೆ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವ ನ್ಯಾಯಪೀಠ, ಹೈಕೋರ್ಟ್​ನ ಆದೇಶಗಳನ್ನು ಮೀರುವಂತಹ ಅರ್ಜಿಗಳನ್ನು ಭವಿಷ್ಯದಲ್ಲಿ ಪರಿಗಣಿಸಿದರೆ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net