ಕಾಲ್ತುಳಿತ ಪ್ರಕರಣದ ವರದಿ ಬಹಿರಂಗಪಡಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

highcourt
Published on

ಬೆಂಗಳೂರು:  ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಯಾವುದೇ ರಾಷ್ಟ್ರೀಯ ಹಿತಾಸಕ್ತಿ ಅಡಗಿಲ್ಲ. ಹೀಗಾಗಿ ಪ್ರಕರಣದ ಸ್ಥಿತಿಗತಿ ವರದಿಯ ಪ್ರತಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರ ವಿಭಾಗೀಯ ಪೀಠ ಈ ಕಾಲ್ತುಳಿತದ ಕುರಿತಾದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಭಾಗಿಯಾಗಿರುವ ಕಕ್ಷಿದಾರರಿಗೆ ಸ್ಥಿತಿಗತಿ ವರದಿ ನೀಡಬೇಕೆ ಎಂಬುದರ ಕುರಿತು ಅವಲೋಕನ ನಡೆಸಿತು.

ಈ ವೇಳೆ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಸಾರ್ವಜನಿಕ ಹಿತಾಸಕ್ತಿ, ರಾಷ್ಟ್ರೀಯ ಭದ್ರತೆ ಅಥವಾ ಗೌಪ್ಯತೆಯ ಹಕ್ಕುಗಳನ್ನು ಒಳಗೊಂಡಿರುವ ಪ್ರಕರಣಗಳಿಗೆ ಮಾತ್ರ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಅವಕಾಶವಿದೆ. ಆದರೆ ಈ ಪ್ರಕರಣ ಮೇಲಿನ ಮೂರು ವರ್ಗಕ್ಕೂ ಸೇರಿಲ್ಲ. ಹೀಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವ ರಾಜ್ಯದ ಸಮರ್ಥನೆಯನ್ನು ಒಪ್ಪಲಾಗದು ಎಂದು ಪೀಠ ಹೇಳಿದೆ.

ಹೊಣೆಗಾರಿಕೆಯನ್ನು ನಿರ್ಣಯಿಸಲು ಮತ್ತು ಭವಿಷ್ಯದಲ್ಲಿ ಅಂತಹ ಮರುಕಳಿಸದಂತೆ ತಡೆಯಲು

ಸ್ವಯಂಪ್ರೇರಿತ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಹೀಗಾಗಿ ತನಿಖಾ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದು ನ್ಯಾಯಯುತವಾದುದಲ್ಲ ಎಂದು ಪೀಠ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net