ಕ್ಷಮೆಯಾಚಿಸುವಂತೆ ರವಿಕುಮಾರ್‌ಗೆ ಹೈ ಸೂಚನೆ

highcourt
Published on

ಬೆಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರವಾಗಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ಅವರಿಗೆ ಕ್ಷಮೆಯಾಚಿಸುವಂತೆ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರಿಗೆ ಹೈಕೋರ್ಟ್ ಸೂಚಿಸಿದೆ.

ಸಾರ್ವಜನಿಕವಾಗಿ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಜಿಲ್ಲಾಡಳಿತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಶರಣ ಸಿರಸಗಿಯ ನಿವಾಸಿ ದತ್ತಾತ್ರೇಯ ಇಲ್ಕಳಕಿ ಎಂಬುವರು ನೀಡಿದ ದೂರಿನ ಮೇರೆಗೆ ತಮ್ಮ ವಿರುದ್ಧ ದಾಖಲಾದ ಪ್ರಕರಣ ರವಿಕುಮಾರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರ ಪೀಠ ಈ ಆದೇಶ ನೀಡಿದೆ.

ದಾಖಲೆ ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ನೀಡಿರುವ ಹೇಳಿಕೆ ನ್ಯಾಯ ಸಮ್ಮತವಾದುದಲ್ಲ. ಯಾವುದೇ ವ್ಯಕ್ತಿ ಈ ತರನಾದ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ. ಈ ವೇಳೆ ಅರ್ಜಿದಾರರ ಪರ ವಕೀಲರು ಕಕ್ಷಿದಾರರು ಈ ಬಗ್ಗೆ ಬಗ್ಗೆ ಕ್ಷಮೆಯಾಚಿದ್ದಾರೆ ಎಂದು ಪೀಠದ ಮುಂದೆ ನುಡಿದರು.

ಪ್ರತಿಕ್ರಿಯಿಸಿದ ನ್ಯಾಯಪೀಠ ಅರ್ಜಿದಾರರು ಯಾರನ್ನು ಉದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೋ ಅವರ ಬಳಿ ಕ್ಷಮೆ ಕೇಳಬೇಕು. ತದನಂತರ ಅದನ್ನು ಒಪ್ಪಿಕೊಳ್ಳಲು ಅವರಿಗೆ ಸಮಯಾವಕಾಶ ನೀಡಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು. ಅಲ್ಲಿಯವರೆಗೂ ನ್ಯಾಯಪೀಠ ಅರ್ಜಿಯನ್ನು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net