ತಾಯಿ ಕೊಂದವನಿಗೆ ಸಮುದಾಯ ಸೇವೆ ಶಿಕ್ಷೆ ಹೈಕೋರ್ಟ್ ಆದೇಶ

Published on

ಬೆಂಗಳೂರು: ಕೆಲಸಕ್ಕೆ ಹೋಗುವಂತೆ ಒತ್ತಾಯ ಮಾಡಿದ 60 ವರ್ಷದ ತಾಯಿಯನ್ನು ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ಕೊಲೆಗೈದ ಆರೋಪಿಗೆ ಆರು ತಿಂಗಳ ಕಾಲ ಸ್ಥಳೀಯ ಶಾಲೆಯೊಂದರಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಮಡಿಕೇರಿ ತಾಲೂಕಿನ ಸಂಪಾಜೆಯ ಆರೋಪಿ ಅನಿಲ್ ಎಂಬಾತನನ್ನು ಅಗತ್ಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, 10 ಸಾವಿರ ರೂ. ದಂಡ ವಿಧಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ತನಿಖಾಧಿಕಾರಿ ಪ್ರಕಾರ ಆರೋಪಿ ಅನಿಲ್ ಕುಡಿತದ ಚಟಕ್ಕೆ ಬಿದ್ದಿದ್ದ. 2015ರ ಏ.4ರಂದು ಘಟನೆ ನಡೆದ ದಿನ ಕುಡಿದು ಮನೆಗೆ ಬಂದಿದ್ದ. ಈ ವೇಳೆ ತಾಯಿ ಗಂಗಮ್ಮ ‘ಕುಡಿದು ಮನೆಗೆ ಬರಬೇಡ. ಯಾವುದಾದರೂ ಕೆಲಸಕ್ಕೆ ಹೋಗು’ ಎಂದು ಏರುಧ್ವನಿಯಲ್ಲಿ ಹೇಳಿದ್ದರು. ಕೋಪಗೊಂಡ ಆತ ತಾಯಿ ಮೇಲೆ ಹಲ್ಲೆ ನಡೆಸಿದ್ದ. ಆದರೆ ಆರೋಪಿಗೆ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

ಕೆಲ ಕಾಲ ವಾದ ಆಲಿಸಿದ ಪೀಠ, ಆರೋಪಿ ಕುಡಿದ ಅಮಲಿನಲ್ಲಿ ಕೃತ್ಯವೆಸಗಿದ್ದಾನೆ. ಆದರೆ ತಾಯಿಯ ಮರಣಪೂರ್ವ ಹೇಳಿಕೆ ಹೊರತುಪಡಿಸಿ ಘಟನೆಗೆ ಯಾವುದೇ ನೇರ ಸಾಕ್ಷಿಗಳು ಇಲ್ಲ. ಅಲ್ಲದೆ, ಈಗಾಗಲೇ ಎರಡು ವರ್ಷ ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ಸಮುದಾಯ ಸೇವೆ ಸಲ್ಲಿಸುವಂತೆ ಹೇಳಿ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಪ್ರತ್ಯಕ್ಷ ಸಾಕ್ಷಿ ಇಲ್ಲ

ಘಟನೆ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಗಂಗಮ್ಮ, ಮಗ ಹಲ್ಲೆ ಮಾಡಿರುವ ಸಂಬಂಧ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದ್ದರಿಂದ 2017ರ ಮಾರ್ಚ್‌ನಲ್ಲಿ ಕೊಡಗಿನ ವಿಚಾರಣಾ ನ್ಯಾಯಾಲಯ ಅನಿಲ್ನನ್ನು ಆರೋಪ ಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ, ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net