ಸಹಮತದ ದೈಹಿಕ ಸಂಬಂಧ ಅತ್ಯಾಚಾರವಲ್ಲ ಹೈಕೋರ್ಟ್ ಅಭಿಪ್ರಾಯ

highcourt
Published on

ಬೆಂಗಳೂರು: ಯುವಕ- ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ ಎಂದಮಾತ್ರಕ್ಕೆ ಅವರ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿದ ನಂತರ ಮದುವೆಯಾಗದ ಹಿನ್ನೆಲೆಯಲ್ಲಿ ಯುವತಿಯು ಯುವಕನ ಮೇಲೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ.

ಈ ವಿಚಾರವಾಗಿ ತಮ್ಮ ವಿರುದ್ಧ ಬೆಂಗಳೂರಿನ ಜಗಜೀವನ್‌ರಾಮ್ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೋರ್ವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯುವಕ- ಯುವತಿ ನಡುವೆ ಪರಸ್ಪರ ಪ್ರೀತಿ ಇದ್ದು, ಆರು ವರ್ಷಗಳ ಕಾಲ ಜತೆಗಿದ್ದರು. ಈ ನಡುವೆ ಒಮ್ಮತದ ದೈಹಿಕ ಸಂಪರ್ಕ ಹೊಂದಿದ್ದಾರೆ. ಈ ಪೂರ್ಣ ಪ್ರಕ್ರಿಯೆಯಲ್ಲಿ ಅರ್ಜಿದಾರರೂ ಎಲ್ಲಿಯೂ ದೂರುದಾರೆಗೆ ಮದುವೆಯಾಗುವುದಾಗಿ ಭರವಸೆ ನೀಡಿಲ್ಲ ಎನ್ನುವುದನ್ನು ಪೀಠದ ಗಮನಕ್ಕೆ ತಂದರು.

ಅಲ್ಲದೆ, ಅರ್ಜಿದಾರರು ದೂರುದಾರೆಯನ್ನು ನಿರ್ಲಕ್ಷಿಸಿದ ಹಿನ್ನೆಲೆ ಹಾಗೂ ಬೇರೊಂದು ಹುಡುಗಿಯ ಜತೆಗೆ ಮದುವೆ ನಿಶ್ಚಯವಾಗಿರುವುದನ್ನು ಆಕೆಯ ಬಳಿ ಹೇಳಿಕೊಂಡಾಗ ಆಕೆ 10 ಲಕ್ಷ ರೂ.ಗಾಗಿ ಬೇಡಿಕೆ ಇಟ್ಟಿದ್ದಳು. ನಂತರ ಅರ್ಜಿದಾರರು ಆಕೆಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಈಗಾಗಲೇ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಹಾಗಾಗಿ ಅರ್ಜಿಯನ್ನು ಮಾನ್ಯ ಮಾಡಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.

ಈ ವೇಳೆ ದೂರುದಾರೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣದಲ್ಲಿ ದೂರುದಾರೆಗೆ ಬೆದರಿಕೆಯೊಡ್ಡಿ ದೂರುದಾರೆಯ ಜತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದಿದ್ದರು. ಜತೆಗೆ ಈ ರೀತಿ ವಿವಾಹಪೂರ್ವಕ ಸಂಬಂಧ ಹೊಂದಿ ಮದುವೆಯಾಗುವುದಾಗಿ ಭರವಸೆ ನೀಡಿ, ಈಗ ಒಲ್ಲೆ ಎನ್ನುತ್ತಿದ್ದಾರೆ. ಆದ್ದರಿಂದ ಪ್ರಕರಣ ರದ್ದುಗೊಳಿಸದಂತೆ ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಮೇಲಿನಂತೆ ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಗೊಳಿಸಿದೆ.

ಏನಿದು ಪ್ರಕರಣ?

ದೂರುದಾರೆ ಮೊಬೈಲ್ ಸಿಮ್ ಕಾರ್ಡ್ ರಿಚಾರ್ಚ್ ಮಾಡಿಸಲು 2012ರಲ್ಲಿ ಆಗಾಗ್ಗೆ ಅರ್ಜಿದಾರನ ಮೊಬೈಲ್ ಅಂಗಡಿಗೆ ಭೇಟಿ ನೀಡುತ್ತಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಪ್ರೀತಿಯಲ್ಲಿದ್ದ ಆರು ವರ್ಷದಲ್ಲಿ ಇಬ್ಬರು ಹಲವು ಬಾರಿ ದೈಹಿಕ ಸಂಪರ್ಕ ನಡೆಸಿದ್ದರು. ಆದರೆ, 2018ರ ಜು.3ರಂದು ದೂರುದಾರೆ, ಅರ್ಜಿದಾರನ ವಿರುದ್ಧ ಬೆಂಗಳೂರಿನ ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net