

ನವದೆಹಲಿ: ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ವಿರುದ್ಧ ಯಾವುದೇ ಮಾನಹಾನಿಕರ ಸುಳ್ಳು ಹೇಳಿಕೆ ನೀಡದಂತೆ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಿರ್ದೇಶನ ನೀಡಿದೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಪರಿಮಿತ ಹಕ್ಕಲ್ಲ. ಮಾನಹಾನಿಕರ ಹೇಳಿಕೆಗಳು ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರಬಾರದು. ಆಗಸ್ಟ್ 14ರವರೆಗೆ ತಮ್ಮ ಆದೇಶ ಜಾರಿಯಲ್ಲಿರುತ್ತದೆ. ಮಧ್ಯಂತರ ಆದೇಶ ನೀಡದಿದ್ದಲ್ಲಿ ಪ್ರತಿವಾದಿಯ ವಿರುದ್ಧ ಮಾನಹಾನಿಕರ ಹೇಳಿಕೆಗಳು ಮುಂದುವರಿಯುವ ಮೂಲಕ ಪ್ರತಿಷ್ಠೆಗೆ ಧಕ್ಕೆ ತರುವ ಅಪಾಯವಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜಭವನದ ಮಹಿಳಾ ಗುತ್ತಿಗೆ ಉದ್ಯೋಗಿಯೊಬ್ಬರು ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದರೊಂದಿಗೆ ಕೋಲ್ಕತ್ತಾ ಪೊಲೀಸರು ಮೇ ತಿಂಗಳಿನಲ್ಲಿ ರಾಜ್ಯಪಾಲರ ವಿಚಾರಣೆ ಆರಂಭಿಸಿದ್ದರು.
ಮಹಿಳೆಯರು ರಾಜಭವನಕ್ಕೆ ಹೋಗಲು ಹೆದರುತ್ತಾರೆ ಎಂದು ಮಮತಾ ಬ್ಯಾನರ್ಜಿ ರಾಜ್ಯಪಾಲರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದರ ವಿರುದ್ಧ ರಾಜ್ಯಪಾಲರು ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಬ್ಯಾನರ್ಜಿ ಪರ ವಕೀಲ ಸಂಜಯ್ ಬಸು ಹೇಳಿದ್ದಾರೆ.