

ಬೆಂಗಳೂರು:ನಮ್ಮನ್ನು 60 ವರ್ಷ ವಯೋಮಿತಿಯವರೆಗೆ ಉದ್ಯೋಗದಲ್ಲಿ ಮುಂದುವರಿಸಲು ನಿರ್ದೇಶನ ನೀಡುವಂತೆ ಕೋರಿ ಮಂಡಳಿಯ ನೌಕರರು ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ರೇಷ್ಮೆ ಮಂಡಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಕೇಂದ್ರ ರೇಷ್ಮೆ ಮಂಡಳಿ ನೌಕರರ ಸಂಘ (ರಿ) ಹಾಗೂ ಸೇವೆಯಿಂದ ಬಿಡುಗಡೆಗೊಳಿಸಲ್ಪಟ್ಟ ಎಸ್. ಶೇಖರ್ ಸೇರಿ ಮಂಡಳಿಯ 32 ಮಂದಿ ನೌಕರರು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಕೇಂದ್ರ ರೇಷ್ಮೆ ಮಂಡಳಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಆಕ್ಷೇಪಣೆ ಸಲ್ಲಿಸುವಂತೆ ಮಂಡಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.
ಅರ್ಜಿದಾರರು ಹಲವು ವರ್ಷಗಳಿಂದ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ 57ರಿಂದ 59 ವರ್ಷದ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ತಮ್ಮನ್ನು 60 ವರ್ಷದವರೆಗೆ ಸೇವೆಯಲ್ಲಿ ಮುಂದುವರಿಸುವಂತೆ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳ ವಿವಿಧ ದಿನಾಂಕಗಳಲ್ಲಿ ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.