

ಬೆಂಗಳೂರು: ಸಿನಿಮಾ ಸೆಟ್ ಹಾಕಲು ನಗರದ ಎಚ್ಎಂಟಿ ಮೈದಾನದಲ್ಲಿ ನೂರಾರು ಮರಗಳನ್ನು ಕಡಿದ ಆರೋಪದ ಮೇಲೆ ರಾಕಿಂಗ್ಸ್ಟಾರ್ ಯಶ್ ನಟನೆಯ ಟಾಕ್ಸಿಕ್ (Toxic) ಚಿತ್ರದ ವಿರುದ್ಧ ಅರಣ್ಯ ಇಲಾಖೆ ದಾಖಲಿಸಿದ್ದ ಎಫ್ಐಆರ್ಗೆ ಕೋರ್ಟ್ ತಡೆ ನೀಡಿದ್ದು, ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ.
ಬೆಂಗಳೂರಿನ ಹೊರವಲಯದಲ್ಲಿರುವ ಎಚ್ಎಂಟಿಯ ಮೈದಾನದಲ್ಲಿ ಟಾಕ್ಸಿಕ್ (Toxic) ಚಿತ್ರತಂಡ ಬೃಹತ್ ಸೆಟ್ ನಿರ್ಮಿಸಿತ್ತು. ಈ ಸೆಟ್ ನಿರ್ಮಾಣ ಮಾಡಲು ಅನುಮತಿ ಇಲ್ಲದೆ ನೂರಾರು ಮರಗಳನ್ನು ಕಡಿದು ಹಾಕಲಾಗಿತ್ತು. ಈ ಸಂಬಂಧ ವಕೀಲರೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ವಿಚಾರ ತಿಳಿದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಿನಿಮಾ ಸೆಟ್ ಹಾಕುವ ಮುಂಚೆ ಆ ಪ್ರದೇಶ ಹೇಗಿತ್ತು, ಸೆಟ್ ನಿರ್ಮಾಣ ಮಾಡಿದ ಮೇಲೆ ಹೇಗಾಗಿದೆ ಎಂದು ಮಾಧ್ಯಮಗಳ ಮುಂದೆ ತೋರಿಸಿದ್ದರು. ಆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ FIR ದಾಖಲಿಸಲಾಗಿತ್ತು.
ಎಫ್ಐಆರ್ ತಡೆ ಕೋರಿ ಚಿತ್ರತಂಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಮಧ್ಯಂತರ ತಡೆ ಆಜ್ಞೆ ನೀಡಿ ಆದೇಶ ಹೊರಡಿಸಿದ್ಧಾರೆ. ಈ ವಿಚಾರ ತಿಳಿದು ನಿರ್ಮಾಪಕರು ನಿಟ್ಟಿಸಿರು ಬಿಟ್ಟಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಟಾಕ್ಸಿಕ್ಗೆ (Toxic) ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಬಂಡವಾಳ ಹೂಡುತ್ತಿದೆ.