ಹೈಟೆಕ್ ಡಯಾಗ್ನಾಸ್ಟಿಕ್ಸ್ ಕೇಂದ್ರ ಸ್ಥಾಪನೆಗೆ ಕ್ರಮ: ಡಿಸಿಎಂ ಡಾ.ಅಶ್ವತ್ಥನಾರಾಯಣ ಭರವಸೆ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಯಂತ್ರ ಲೋಕಾರ್ಪಣೆ

19-07-rama-ashwath1
Published on

ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಕಂಪನಿಯು ಕೊಡುಗೆಯಾಗಿ ನೀಡಿರುವ ಅತ್ಯಾಧುನಿಕ ಸಿಟಿ ಸ್ಕ್ಯಾನ್ ಯಂತ್ರವನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಸ್ಪತ್ರೆಯನ್ನು ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಹೊಸ ಸೇರ್ಪಡೆ ಸಿಟಿ ಸ್ಕ್ಯಾನ್ ಯಂತ್ರ. ಇದನ್ನು ತನ್ನ ಸಿಎಸ್‌ಆರ್ ನಿಧಿಯಡಿ ಕೊಡುಗೆಯಾಗಿ ನೀಡಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಬೆಂಗಳೂರಿಗೆ ಹೋಗಬೇಕಾಗಿಲ್ಲ : ಜಿಲ್ಲಾ ಕೇಂದ್ರದಲ್ಲಿ ಎಲ್ಲ ಕಾಯಿಲೆಗಳನ್ನು ಪತ್ತೆ ಹಚ್ಚಬಲ್ಲ ಹೈಟೆಕ್ ಡಯಾಗ್ನಾಸ್ಟಿಕ್ಸ್ ಕೇಂದ್ರವನ್ನು ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಜಿಲ್ಲೆಯ ಜನರು ಆರೋಗ್ಯ ಪರೀಕ್ಷೆಗಾಗಿ ಬೆಂಗಳೂರಿಗೆ ಹೋಗಬೇಕಾಗಿಲ್ಲ. ಇಲ್ಲಿಯೇ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ಸೇರಿ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯೂ ಆರೋಗ್ಯ ಮೂಲಸೌಕರ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಜಿಲ್ಲೆಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಇದರ ಜತೆಗೆ ಶಿಕ್ಷಣ, ಮೂಲಸೌಕರ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಜಲಜೀವನ್ ಮಿಷನ್ ಮೂಲಕ ಪ್ರತಿ ಮನೆಗೂ ನದಿಮೂಲದಿಂದ ಶುದ್ಧ ನೀರು ಪೂರೈಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲವಾಡಿ ದೇವರಾಜ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ., ಜಿಪಂ ಸಿಇಒ ಇಕ್ರಂ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಶಿಧರ್ ಇದ್ದರು.

ಆಡಿಯೋ ನಕಲಿ : ಸಿಎಂ ಬದಲಾವಣೆ ಕುರಿತ ಆಡಿಯೋ ಬಗ್ಗೆ ಸ್ಪಂದಿಸಿ ಡಿಸಿಎಂ ಅಶ್ವತ್ಥನಾರಾಯಣ ಅವರು, ಆ ಆಡಿಯೋ ನಕಲಿಯಾಗಿದ್ದು, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಆಡಿಯೋ ನನ್ನದಲ್ಲ ಎಂದಿರುವಾಗ ಈ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಸಿಎಂ ರಾಜೀನಾಮೆ ನೀಡುತ್ತಾರೆ ಎಂಬುದು ವದಂತಿ ಅಷ್ಟೆ. ನಮ್ಮ ಸರ್ಕಾರ ಎರಡು ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಲಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಯನ್ನು ಜಿಲ್ಲೆಗೆ ಕರೆತಂದು, ವಾಸ್ತವ ತೋರಿಸಲಾಗಿದೆ. ಕೂಡಲೇ ಈ ಕಾಮಗಾರಿಗಳು ಶುರುವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net