

ಬೆಂಗಳೂರು: ನೋಂದಣಿ ಕಾಯ್ದೆ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯ ಸಬ್ ರಿಜಿಸ್ಟ್ರಾರ್‌ಗಳು ಕರ್ತವ್ಯ ನಿರ್ವಹಿಸಬೇಕು. ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣಕ್ಕೆ ದಸ್ತಾವೇಜು ನೋಂದಣಿಗೆ ನಿರಾಕರಿಸಲು ಅವಕಾಶ ಇಲ್ಲವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬ್ಯಾಂಕ್ ಹರಾಜಿನಲ್ಲಿ ಖರೀದಿಸಿದ್ದ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡದ ಸಬ್ ರಿಜಿಸ್ಟ್ರಾರ್ ಕ್ರಮ ಪ್ರಶ್ನಿಸಿ ಭರತ್ ಗೌಡ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.
ನೋಂದಣಿ ಕಾಯ್ದೆ ಅಡಿಯಲ್ಲಿ ಯಾವುದೇ ಗೊಂದಲ ಇಲ್ಲವಾದಲ್ಲಿ ನೋಂದಣಿ ಮಾಡದೆ ನಿರಾಕರಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್‌ಗಳಿಗೆ ಇಲ್ಲವೆಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಜತೆಗೆ ಪ್ರಕರಣ ಸಂಬಂಧ ಹಾರಾಜೀನಲ್ಲಿ ಆಸ್ತಿ ಖರೀದಿಸಿದ ಅರ್ಜಿದಾರರು ದಾಖಲೆಗಳನ್ನು ಪಡೆದು ವಿಳಂಬ ಇಲ್ಲದೆ ನೋಂದಣಿ ಮಾಡಿಕೊಡುವಂತೆ ಉಪನೋಂದಣಾಧಿಕಾರಿಗೆ ನ್ಯಾಯಪೀಠ ಸೂಚಿಸಿದೆ.
2002ರ ಹಣಕಾಸು ಸ್ವತ್ತುಗಳು ಮತ್ತು ಭದ್ರತಾ ಹಿತಾಸಕ್ತಿ ಜಾರಿ ಕಾಯ್ದೆ (ಸರ್ಫೇಸಿ ಕಾಯ್ದೆಯ) ಸೆಕ್ಷನ್ 26(ಇ) ಅನ್ವಯ ಭದ್ರತಾ ಆಸಕ್ತಿ ನೋಂದಣಿಯ ನಂತರ ಜಾರಿಯಲ್ಲಿರುವ ಕಾನೂನಿಗಿಂತ ಸುರಕ್ಷಿತ ಸಾಲಗಾರರಿಗೆ ಆದ್ಯತೆಯನ್ನು ಕಡ್ಡಾಯಗೊಳಿಸುತ್ತದೆ. ಸೆಕ್ಷನ್ 35 ಪ್ರಕಾರ, ಸದ್ಯಕ್ಕೆ ಜಾರಿಯಲ್ಲಿ ಇರುವ ಕಾನೂನಿನಲ್ಲಿ ಅಸಮಂಜಸವಾಗಿದ್ದರು ಕಾಯ್ದೆ ಪರಿಣಾಮ ಬೀರಲಿದೆ.
ಆದರೆ, ಈ ರೀತಿಯ ಪ್ರಕರಣಗಳಲ್ಲಿ ಸಾಲಗಾರನ ಹಕ್ಕು ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಯಾವುದೇ ಆದೇಶ ಮಾಡದಿದ್ದಲ್ಲಿ ಅದನ್ನು ತಡೆಹಿಡಿಯಲಾಗದು ಎಂದು ಪೀಠ ಹೇಳಿದೆ.
ಅಷ್ಟೆ ಅಲ್ಲದೆ, ಪ್ರಸ್ತುತ ಪ್ರಕರಣದಲ್ಲಿ ನ್ಯಾಯಾಲಯ, ಅರೆ ನ್ಯಾಯಾಲಯದ ಮುಂದೆ ಯಾವುದೇ ರೀತಿಯ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಹೀಗಾಗಿ ಉಪನೋಂದಣಿ ನಿಯಮ 171ರ ಅಡಿಯಲ್ಲಿ ಉಲ್ಲಂಘನೆ ಆಗಿದ್ದಲ್ಲಿ ನೋಂದಣಿಗೆ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸಬ್ ರಿಜಿಸ್ಟ್ರಾರ್ ನೋಂದಣಿ ನಿರಾಕರಿಸುವ ಅಧಿಕಾರ ಇಲ್ಲವೆಂದು ನ್ಯಾಯಪೀಠ ತಿಳಿಸಿದೆ. ಮುಂದುವರಿದು, ರಾಜ್ಯ ಸರ್ಕಾರ ನೋಂದಣಿ ಕಾಯ್ದೆ ಕುರಿತಂತೆ ಸೂಕ್ತ ರೀತಿಯ ಸೂತ್ತೋಲೆ ಹೊರಡಿಸಬೇಕು ಎಂದು ಪೀಠ ಸಲಹೆ ನೀಡಿದೆ.
ಏನಿದು ಪ್ರಕರಣ?:
ಬೆಂಗಳೂರು ನಗರದ ವಿಲ್ಸನ್ ಗಾರ್ಡನ್‌ನ ಹೊಂಬೇಗೌಡನಗರದಲ್ಲಿ 6,000 ಚದರ ಅಡಿಯ ಅಡಮಾನ ಆಸ್ತಿಗೆ ಸಂಬಂಧಿಸಿದಂತೆ 2022ರ ಮಾರ್ಚ್‌ನಲ್ಲಿ ಕೆನರಾ ಬ್ಯಾಂಕ್ ನಡೆಸಿದ ಹರಾಜಿನಲ್ಲಿ ಅರ್ಜಿದಾರರು ಯಶಸ್ವಿ ಬಿಡ್‌ದಾರರಾಗಿದ್ದರು. ಹರಾಜಿನ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ 2022ರ ಸೆ.30ರಂದು ಅವರಿಗೆ ಮಾರಾಟ ಪ್ರಮಾಣ ಪತ್ರವನ್ನು ಕೆನರಾ ಬ್ಯಾಂಕ್ ವಿತರಿಸಿತ್ತು.
ಜಮೀನು ನೋಂದಣಿಗೆ ಸಂಬಂಧಿಸಿದಂತೆ ಅಗತ್ಯ ಇರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಿ ನೋಂದಣಿ ಮಾಡಿಕೊಡುವಂತೆ ಕೋರಿ ಜೆ.ಪಿ.ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಇದನ್ನು ನಿರಾಕರಿಸಿದ ಸಬ್ ರಿಜಿಸ್ಟ್ರಾರ್, ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆದ್ದರಿಂದ ಜಮೀನನ್ನು ನೋಂದಣಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. 2024ರ ಫೆ.12ರಂದು ಮತ್ತೊಂದು ಬಾರಿ ಮನವಿ ಸಲ್ಲಿಸಿದ್ದರು ಸಬ್ ರಿಜಿಸ್ಟ್ರಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.