

ಶ್ರೀ ವಸಿಷ್ಠರು ವಿದೂರಥನ ರಾಜಧಾನಿಯಲ್ಲಿ ನಡೆಯುತ್ತಿರುವ ಯುದ್ಧದ ವರ್ಣನೆಯನ್ನು ಮಾಡುತ್ತಿದ್ದಾರೆ. ಪ್ರಾಚೀನ ಪುರಾಣಗಳಲ್ಲಿ ಅಲ್ಲಲ್ಲಿ ಯುದ್ಧದ ವರ್ಣನೆ ಬರುತ್ತದೆ. ಆದರೆ ಇಷ್ಟು ದೀರ್ಘವಾದ ವರ್ಣನೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ದೀರ್ಘವಾಗಿ ವರ್ಣನೆಯಾಗುತ್ತಿದ್ದರೂ, ವಿವಿಧ ವರಸೆಗಳನ್ನು ಪ್ರಯೋಗಿಸಿ ವರ್ಣಿಸುತ್ತಿರುವುದು ಯೋಗವಾಸಿಷ್ಠದ ವಿಶೇಷ. ಹಿಂದೆ ವಸಿಷ್ಠರು ತಾವೇ ಒಮ್ಮೆ ಯುದ್ಧರಂಗದ ಪೂರ್ವಸಿದ್ಧತೆಯ ವರ್ಣನೆಯನ್ನು ಮಾಡಿ, ಶ್ರೀರಾಮನ ಕೋರಿಕೆಯಂತೆ ಮತ್ತೊಮ್ಮೆ ಯುದ್ಧವನ್ನು ವರ್ಣನೆ ಮಾಡಿದ್ದಾರೆ. ಅನಂತರ ಈಗ ಯುದ್ಧವನ್ನು ನೋಡುತ್ತಿರುವ ವ್ಯಕ್ತಿಗಳ ಮಾತಿನ ಮೂಲಕ ಯುದ್ಧವನ್ನು ವರ್ಣಿಸುತ್ತಿದ್ದಾರೆ. ಕಣ್ಣಿಗೆ ಕಟ್ಟಿದಂತೆ ಯುದ್ಧವನ್ನು ವರ್ಣಿಸಲು ಎರಡು ಉದ್ದೇಶಗಳಿವೆ. ಉತ್ಕೃಷ್ಟ ಕಾವ್ಯಗುಣ ಈ ಗ್ರಂಥದಲ್ಲಿ ಬರಲಿ ಎಂಬುದು ಒಂದು ಉದ್ದೇಶವಾದರೆ, ಕಣ್ಣಿಗೆ ಕಟ್ಟಿದಂತೆ ಸ್ಪಷ್ಟವಾಗಿರುವಂತೆ ತೋರುತ್ತಿರುವ ಈ ಪ್ರಪಂಚವು ತೋರಿಕೆ ಮಾತ್ರ, ಸತ್ಯವಲ್ಲ ಎಂಬುದನ್ನು ಸಾಬೀತುಪಡಿಸುವುದು ಇನ್ನೊಂದು ಉದ್ದೇಶ. ಯುದ್ಧ ವರ್ಣನೆಯಿಂದ ಆ ಕಾಲದ ಯುದ್ಧದ ಎಲ್ಲ ಸೂಕ್ಷ್ಮ ಮರ್ಮಗಳ ಪರಿಚಯ ಓದುಗರಿಗೆ ಆಗುತ್ತಿದೆ. ಯುದ್ಧವನ್ನು ರಣಾಂಗಣದ ಮೇಲಿನ ಆಕಾಶದಲ್ಲಿ ಇದ್ದುಕೊಂಡು ಲೀಲಾಮಹಾರಾಣಿಯು ನೋಡುತ್ತಿದ್ದಾಳೆ ಎಂಬುದನ್ನು ಮರೆಯಬಾರದು.
ಶ್ರೀ ವಸಿಷ್ಠರ ಮಾತು ಮುಂದುವರಿದಿದೆ. ‘ಶ್ರೀರಾಮ! ಯುದ್ಧದ ಭೀಕರತೆ ಎಷ್ಟೆಂದರೆ, ತಲೆಯನ್ನು ಕತ್ತರಿಸಿದ್ದರಿಂದ ಕುತ್ತಿಗೆಯ ಕೆಳಭಾಗದ ದೇಹ (ಕಬಂಧ) ಗಳು ತೂರಾಡುತ್ತ ಬಿದ್ದು ಪ್ರಾಣ ಬಿಡುತ್ತಿವೆ. ಪ್ರಾಣೋತ್ಕ›ಮಣದ ಸಂಕಟದಲ್ಲಿ ಕಬಂಧಗಳು ತೂರಾಡುವಿಕೆ ಎಂಬ ನರ್ತನ ಮಾಡುತ್ತಿದ್ದರೂ, ರಣಹದ್ದುಗಳು ಅವುಗಳನ್ನು ಮುತ್ತಿಕೊಳ್ಳುತ್ತಿವೆ. ಈಗತಾನೆ ತಲೆ ಕತ್ತರಿಸಲ್ಪಟ್ಟಿದ್ದರಿಂದ ಉಂಟಾದ ಗಂಟಲಿನ ಕುಳಿಯಲ್ಲಿ ರಕ್ತಪಿಪಾಸೆಯಿಂದ ತಮ್ಮ ಕೊಕ್ಕುಗಳನ್ನು ಒಳಕ್ಕೆ ತೂರಿಸಲು ಆ ರಣಹದ್ದುಗಳು ಮುಂದಾಗುತ್ತಿವೆ. ಈ ರೀತಿಯಲ್ಲಿ ಮುತ್ತುತ್ತಿರುವ ಹದ್ದುಗಳಿಂದ ಆಕುಲಗೊಂಡ, ತಾಳೆಮರದಂತೆ ಎತ್ತರವಾಗಿರುವ ಕಬಂಧಗಳು ರಣಾಂಗಣದಲ್ಲಿ ಭಯಂಕರ ನೃತ್ಯವನ್ನು ಮಾಡುತ್ತಿರುವಂತೆ ಕಾಣುತ್ತಿವೆ. ಯುದ್ಧರಂಗದ ವಾದ್ಯವಿಶೇಷಗಳ ತಾಳವನ್ನು ಮೀರಿ ಈ ಕಬಂಧಗಳು ನರ್ತಿಸುವಂತೆ ಕಾಣುತ್ತಿವೆ.’
‘ಆಕಾಶದಲ್ಲಿ ನೆರೆದಿರುವ ದೇವತಾಗಣಗಳ ಗೋಷ್ಠಿಗಳಲ್ಲಿ ಪರಸ್ಪರ ಸಂಭಾಷಣೆಗಳಾಗುತ್ತಿವೆ. ಇಲ್ಲಿರುವ ಧೀರರಾದ ಸೈನಿಕರು ಯಾವಾಗ ಮೇಲಿನ ಲೋಕಕ್ಕೆ ಹೋಗುತ್ತಾರೆ? ಹೇಗೆ ಹೋಗುತ್ತಾರೆ? ಇವರಲ್ಲಿ ಯಾರು ಯಾರು ಹೋಗುತ್ತಾರೆ? - ಇತ್ಯಾದಿ ಮಾತುಗಳು ಅಲ್ಲಿಂದ ಕೇಳಿಬರುತ್ತಿವೆ. ಅಗೋ! ಈ ಭಟನನ್ನು ನೋಡು, ಈ ಯುದ್ಧರಂಗದಲ್ಲಿ ಬಹುಶಃ ಯಾರೂ ಇವನಿಗೆ ಸರಿಸಮಾನರಾದ ಭಟರು ಇರಲಿಕ್ಕಿಲ್ಲ. ಏಕೆಂದರೆ ಇವನ ಬಿಲ್ಲುಗಾರಿಕೆಯ ಚಾತುರ್ಯದಿಂದ ದೊಡ್ಡ ಸಂಖ್ಯೆಯ ಸೈನಿಕರು ಖಾಲಿಯಾಗುತ್ತಿದ್ದಾರೆ. ಸಮುದ್ರವು ಹರಿಯುತ್ತಿರುವ ನದಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ ಮೂಲಕ ನುಂಗುತ್ತಿರುವಂತೆ, ಈ ಸೇನೆಗಳನ್ನು ಈ ಯೋಧನು ನುಂಗುತ್ತಿದ್ದಾನೆ. ಮೀನು, ಮೊಸಳೆ ಮುಂತಾದ ಜಲಪ್ರಾಣಿಗಳ ಸಮೇತ ನದಿಗಳನ್ನು ಸಾಗರವು ನುಂಗುವಂತೆ, ಆನೆ, ರಥ, ಕುದುರೆ ಮುಂತಾದವುಗಳ ಸಮೇತ ಸೇನೆಗಳನ್ನು ಈ ಭಟನು ನುಂಗುತ್ತಿದ್ದಾನೆ.’
‘ಯುದ್ಧರಂಗದಲ್ಲಿರುವ ಆನೆಗಳ ಗಂಡಸ್ಥಳಗಳಲ್ಲಿ ಧಾರಾಕಾರವಾಗಿ ಸುರಿ ಯುತ್ತಿರುವ ಬಾಣಗಳ ಸಮೂಹಗಳನ್ನು ನೋಡಿದರೆ, ಪರ್ವತಶೃಂಗಗಳಲ್ಲಿ ಬೀಳುತ್ತಿರುವ ಸಂಪೂರ್ಣ ವೃಷ್ಟಿಗಳಂತೆ ತೋರುತ್ತಿವೆ.’
‘ಈ ಹೊತ್ತಿಗೆ ಸರಿಯಾಗಿ ಯುದ್ಧರಂಗದಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯಿತು. ಒಬ್ಬ ಯೋಧನ ತಲೆ ಕುಂತಾಯುಧದಿಂದ ಕತ್ತರಿಸಲ್ಪಟ್ಟು ಮೇಲಕ್ಕೆ ಹಾರಿಹೋಗುತ್ತಿದೆ. ಆ ತಲೆಯು ಕೂಗುತ್ತಿದೆ - ‘ಅಯ್ಯೋ ಬದುಕಿದೆ!’ ಕತ್ತರಿಸಲ್ಪಟ್ಟಿರುವ ತಲೆಯಿಂದ ಈ ಉದ್ಗಾರ ಹೇಗೆ ಬಂತು? ತನ್ನ ತಲೆಯು ಕುಂತಾಯುಧದಿಂದ ಕತ್ತರಿಸಲ್ಪಡುತ್ತಿರುವುದನ್ನು ನೋಡಿದ ಆ ಯೋಧನು ಶಿರಚ್ಛೇದದ ನೋವಿಗೆ ಹೆದರಿ ‘ಅಯ್ಯೋ ಈ ಕುಂತಾಯುಧದಿಂದ ಸತ್ತೆ’ ಎಂಬುದಾಗಿ ಹೇಳಬೇಕೆನ್ನುವ ಕ್ಷಣದಲ್ಲಿಯೇ ಅವನ ತಲೆ ಕತ್ತರಿಸಲ್ಪಟ್ಟು, ಮೇಲೆ ಹಾರಿಹೋಗುತ್ತಿದೆ. ಮೇಲೆ ಹಾರಿಹೋಗುತ್ತಿದ್ದಂತೆ ತಾನು ಸ್ವರ್ಗಕ್ಕೇರುತ್ತಿರುವ ಸಂಭ್ರಮ ಆ ಯೋಧನ ಜೀವಾತ್ಮಕ್ಕೆ ಕಂಡಿತು. ಇದರಿಂದ ‘ನಾನು ಸತ್ತಿಲ್ಲ, ಬದುಕಿದ್ದೇನೆ’ ಎಂಬ ಹರ್ಷಭರಿತವಾದ ಉದ್ಗಾರವು ಆ ತಲೆಯ ಬಾಯಿಯಿಂದ ಆಕಾಶದಲ್ಲಿ ಹಕ್ಕಿಯ ಕೂಗಿನಂತೆ ಕೇಳಿಬಂತು. ಇದನ್ನು ಅಲ್ಲಿರುವ ಜನರು ಕೇಳಿಸಿಕೊಂಡರು.’ (ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರ ಜೀವಾತ್ಮವು ಶರೀರ ಬಿದ್ದುಹೋದ ನಂತರ ಸ್ವರ್ಗಕ್ಕೆ ಸೇರುವ ಸಂತೋಷದಲ್ಲಿ ಇರುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.)
‘ಒಬ್ಬ ಸೈನಿಕ ಆವೇಶದಿಂದ ಕೂಗಿ ಹೇಳುತ್ತಿದ್ದಾನೆ. ಈ ಸೇನೆಯು (ಶತ್ರುಸೇನೆಯು) ಪಾಷಾಣ ಯಂತ್ರದ ಮೂಲಕ ನಮ್ಮ ಮೇಲೆ ಕಲ್ಲುಗಳನ್ನು ಎರಚುತ್ತಿದೆ. ಈ ಸೇನೆಯನ್ನು ಬಾಣ ಪ್ರಯೋಗದ ಚಮತ್ಕಾರದಿಂದ ಸರಪಣಿಯ ಬಲೆಯಲ್ಲಿ ಕಟ್ಟಿಹಾಕಿದಂತೆ ಕಟ್ಟಿಹಾಕು’. ‘ಆಗಸದಲ್ಲಿದ್ದ ದೇವಗಣಗಳಲ್ಲಿ ಒಬ್ಬ ದೇವ ಇನ್ನೊಬ್ಬ ದೇವನಿಗೆ ಹೇಳುತ್ತಿದ್ದಾನೆ. ಅಗೋ ನೋಡು, ವೀರ ಸೈನಿಕನ ಪತ್ನಿಯು ಮೊದಲೇ ಮೃತಳಾದಳು. ಅಪ್ಸರ ಸ್ತ್ರೀಯಾಗಿ ಸ್ವರ್ಗ ಲೋಕದಲ್ಲಿ ಇದ್ದಾಳೆ. ಅವಳು ಈಗ ತನ್ನ ಪತಿಯಾದ ವೀರ ಸೈನಿಕನು ಯದ್ಧದಲ್ಲಿ ವೀರ ಮರಣವನ್ನು ಹೊಂದಿ ಬರುತ್ತಿರುವುದನ್ನು ಅರಿತು ಅವನನ್ನೆ ತನ್ನ ಪತಿಯನ್ನಾಗಿ ಸ್ವೀಕರಿಸಿದ್ದಾಳೆ. ಅವನಿಗೆ ಈಗ ಮನುಷ್ಯ ಜನ್ಮದಲ್ಲಿ ಇರುವ ಹಾಗೆ ಬಿಳಿ ಕೂದಲು ಮತ್ತು ಚರ್ಮದಲ್ಲಿ ನಿರಿಗೆೆಗಳು ಇಲ್ಲ. ಆದ್ದರಿಂದ ಒಮ್ಮೆಲೆ ಪರಿಚಯ ಹತ್ತುವಂತಿಲ್ಲ. ಆದರೂ ಅವನೇ ತನ್ನ ಪತಿಯಂಬುದನ್ನು ಗುರುತು ಹಿಡಿದು ಅವನನ್ನೇ ಪುನಃ ಅಂಗೀಕರಿಸುತ್ತಿದ್ದಾಳೆ.’