

ನವದೆಹಲಿ: ಇತ್ತೀಚೆಗೆಷ್ಟೇ ಪಾಕಿಸ್ತಾನ ಹೊಸ ಭೌಗೋಳಿಕ ನಕ್ಷೆಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಖಂಡ ಜಮ್ಮು ಕಾಶ್ಮೀರವನ್ನು ತನ್ನದೆಂದು ಹೇಳಿದೆ. ಜತೆಗೆ, ಲಡಾಖ್, ಸರ್ ಕ್ರೀಕ್ (ಸಿಂಧೂ ನದಿ ಜಲಸಂಧಿ) ಹಾಗೂ ಗುಜರಾತ್ನ ಜುನಾಗಢ್ವನ್ನು ಸೇರಿಸಿಕೊಂಡಿದೆ.
ಜುನಾಗಢ್ವನ್ನು ತನ್ನದೆಂದು ಹೇಳಿಕೊಳ್ಳಲು ಪಾಕಿಸ್ತಾನಕ್ಕೆ ಐತಿಹಾಸಿಕ ಹಿನ್ನೆಲೆಯೊಂದಿದೆ. ಹೈದರಾಬಾದ್ ನಿಜಾಮರಂತೆ ಜುನಾಗಢ್ ಕೂಡ ಮುಸ್ಲಿಂ ನವಾಬ್ನ ಆಳ್ವಿಕೆಯಲ್ಲಿತ್ತು.
ಭಾರತದ ವಿಭಜನೆ ಬಳಿಕ ಜುನಾಗಢ್ ನವಾಬ ಮಹಮ್ಮದ್ ಮಹಬತ್ ಖಾಂಜಿ ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇಪಡೆ ಮಾಡಲು ಮುಂದಾಗಿದ್ದ. ಆದರೆ, ಅಲ್ಲಿನ ಹಿಂದೂಗಳು ಇದನ್ನು ಒಪ್ಪಲಿಲ್ಲ. ಅಲ್ಲದೇ ಹಿಂದು ಬಾಹುಳ್ಯದ ಪ್ರದೇಶ ಪಾಕಿಸ್ತಾನಕ್ಕೆ ಸೇರುವುದು ಭಾರತಕ್ಕೂ ಇಷ್ಟವಿರಲಿಲ್ಲ.
ಹೀಗಾಗಿ ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರು ಜುನಾಗಢ್ ಪ್ರದೇಶದಲ್ಲಿ ಜನಮತ ಗಣನೆಗೆ ಮುಂದಾದರು. ಬಹುತೇಕರು ಜುನಾಗಢ್ ಭಾರತಕ್ಕೆ ಸೇರಬೇಕೆಂದು ಮತ ಚಲಾಯಿಸಿದರೆ, ಪಾಕಿಸ್ತಾನದ ಪರ ನೂರಕ್ಕಿಂತ ಹೆಚ್ಚು ಮತಗಳು ಸಿಕ್ಕವಷ್ಟೇ. ಹೀಗಾಗಿ ಜುನಾಗಢ್ ಭಾರತದಲ್ಲಿಯೇ ಉಳಿದುಕೊಂಡಿತು.
ಆದರೆ, ಇದನ್ನು ಪಾಕಿಸ್ತಾನ ಒಪ್ಪಲಿಲ್ಲ ಹಾಗೂ 1948ರಲ್ಲಿ ಇದನ್ನು ವಿಶ್ವಸಂಸ್ಥೆಗೆ ಒಯ್ಯಿತು. ಬಳಿಕ ಇದನ್ನು ಎಲ್ಲರೂ ಮರೆತರು. ಮತ್ತೆ ಇದಕ್ಕೆ ಜೀವ ಬಂದಿದ್ದು 2007ರಲ್ಲಿ.
ನವಾಬ್ ಖಾಂಜಿಯ ವಂಶಸ್ಥ ಹಾಗೂ ಸದ್ಯ ಕರಾಚಿಯಲ್ಲಿರುವ ಮಹಮ್ಮದ್ ಜಹಾಂಗೀರ್ ಖಾನ್ ಎಂಬುವನು ಜುನಾಗಢ್ ವಿವಾದಕ್ಕೆ ಜೀವ ಕೊಟ್ಟ. ಈತನ ಪ್ರಕಾರ ಅಂತಾರಾಷ್ಟ್ರೀಯ ವಿಯನ್ನಾ ಒಪ್ಪಂದದ ಪ್ರಕಾರ ಜುನಾಗಢ್ ನವಾಬನ ಆದೇಶ ಇಂದಿಗೂ ಊರ್ಜಿತವಾಗುತ್ತದೆ ಎಂದು ವಾದ ಮಂಡಿಸಿದ್ದಾನೆ.
ಹೀಗಾಗಿ ಪಾಕಿಸ್ತಾನ ಜುನಾಗಢ್ ತನ್ನದೆಂದು ಹೇಳಿಕೊಳ್ಳಲು ಮುಂದಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದನ್ನು ರಾಜಕೀಯ ಉದ್ದೇಶಗಳಿಗಾಘಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಇದು ಪಾಕ್ನಲ್ಲಿ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ.