

ದೊಡ್ಡಬಳ್ಳಾಪುರ: ಕೃಷಿ ವಿಮೆಗೆ ನೋಂದಾಯಿಸಲು ಅವಕಾಶ ನೀಡಲಾಗಿದ್ದು, ಇಂದೇ ಕಡೆಯ ದಿನ ಎಂದು ಸಹಾಯಕ ಕೃಷಿ ನಿರ್ದೇಶಕಿ ಡಿ.ರಾಜೇಶ್ವರಿ ಮಾಹಿತಿ ನೀಡಿದ್ದಾರೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡಲಾಗುತ್ತದೆ. ಅರ್ಹ ರೈತರು ವಿಮೆಗೆ ನೋಂದಾಯಿಸಿಕೊಳ್ಳುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಡಿ.ರಾಜೇಶ್ವರಿ ತಿಳಿಸಿದ್ದಾರೆ.
ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ, ನಾಟಿ ವಿಫಲಗೊಂಡಲ್ಲಿ ವಿಮಾ ರಕ್ಷಣೆ ದೊರೆಯಲಿದೆ. ಹಾಲಿ ಇರುವ ಬೆಳೆಗಳಿಗೆ(ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳುಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆ ದೊರೆಯಲಿದೆ ಎಂದು ತಿಳಿಸಿದ್ದಾರೆ. ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ(14 ದಿನಗಳವರೆಗೆ) ಆಲಿಕಲ್ಲು ಮಳೆ, ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರ ಒದಗಿಸಲಾಗುತ್ತದೆ. ಬೆಳೆ ಕಟಾವು ಪ್ರಯೋಗ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿಯನ್ನು ಪರಿಗಣಿಸಿ, ಬೆಳೆ ವಿಮಾ ನಷ್ಟ ಪರಿಹಾರ ಲೆಕ್ಕಹಾಕಿ ಇತ್ಯರ್ಥ್ಯ ಪಡಿಸಲಾಗುವುದು.
ವಿಮಾ ನೋಂದಣಿಗೆ ಆಗಸ್ಟ್ 16 ಕೊನೆಯ ದಿನ. ಒಂದು ಹೆಕ್ಟೇರ್ಗೆ ರೈತರು ಪಾವತಿಸಬೇಕಾದ ಕಂತಿನ ಮೊತ್ತ ರಾಗಿ ಮಳೆ ಆಶ್ರಿತ 850 ರೂ., ನೀರಾವರಿ 1,015 ರೂ., ಮುಸುಕಿನ ಜೋಳ ಮಳೆ ಆಶ್ರಿತ 1,290 ರೂ., ನೀರಾವರಿ 1,130 ರೂ., ಹುರುಳಿ ಮಳೆ ಆಶ್ರಿತ 410 ರೂ., ನೆಲಗಡಲೆ ಮಳೆ ಆಶ್ರಿತ 1,090 ರೂ.ಆಗಿದ್ದು, ಈ ಬೆಳೆಗಳ ನೋಂದಾಣಿಗೆ ಆಗಸ್ಟ್ 31 ಕೊನೆಯ ದಿನ. ತೊಗರಿ ಮಳೆ ಆಶ್ರಿತ 1,315 ರೂ., ನೀರಾವರಿ 1,005 ರೂ.ಆಗಿದೆ.
ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಬೇಕು. ಹಾಗೆಯೇ ಬೆಳೆ ವಿಮೆ ನೋಂದಣಿಗೆ ಐಡಿ ಸಂಖ್ಯೆ ಕಡ್ಡಾಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.