ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ವೈದ್ಯ ಹೇಮಚಂದ್‌ ಮಾಂಝಿ, ಕಾರಣ ಹೀಗಿದೆ..

padmashri
Published on

ರಾಯ್‌ಪುರ: ಛತ್ತೀಸ್‌ಗಢದ ಪ್ರಮುಖ ಆಯುರ್ವೇದ ವೈದ್ಯ ಹೇಮಚಂದ್‌ ಮಾಂಝಿ ಅವರು ಕಳೆದ ತಿಂಗಳಷ್ಟೇ ಸ್ವೀಕರಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ವಾಪಸ್‌ ನೀಡುವುದಾಗಿ ತೀರ್ಮಾನಿಸಿದ್ದಾರೆ.

ಛತ್ತೀಸ್‌ಗಢದ ನಾರಾಯಣಪುರದಲ್ಲಿ ಮಾವೋವಾದಿಗಳು ಅವರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ಅವರು ತೀರ್ಮಾನಿಸಿದ್ದಾರೆ. ವೈದ್ಯರಾಜ್ ಎಂದು ಕರೆಯಲ್ಪಡುವ ಮಾಂಝಿ, ಹೆಚ್ಚುತ್ತಿರುವ ಬೆದರಿಕೆಗಳಿಂದಾಗಿ ತಮ್ಮ ವೈದ್ಯಕೀಯ ಅಭ್ಯಾಸವನ್ನು ನಿಲ್ಲಿಸಲು ಚಿಂತನೆ ನಡೆಸಿದ್ದಾರೆ.

72 ವರ್ಷದ ಹೇಮಚಂದ್ ಮಾಂಝಿ ಅವರು ಸಾಂಪ್ರದಾಯಿಕ ಔಷಧಕ್ಕೆ ನೀಡಿದ ಕೊಡುಗೆಗಳಿಗಾಗಿ ಕಳೆದ ತಿಂಗಳು ಭಾರತದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.

ಆದರೆ, ಭಾನುವಾರ ರಾತ್ರಿ ನಕ್ಸಲೀಯರು ಚಮೇಲಿ ಮತ್ತು ಗೌರ್ದಂಡ್ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡು ಮೊಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದ್ದು, ಮಾಂಝಿಗೆ ಬೆದರಿಕೆ ಹಾಕುವ ಬ್ಯಾನರ್ ಮತ್ತು ಕರಪತ್ರಗಳನ್ನು ಬಿಟ್ಟು ಹೋಗಿದ್ದಾರೆ. ಕರಪತ್ರಗಳಲ್ಲಿ ಮಾಂಝಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋವನ್ನು ಹಾಕಲಾಗಿತ್ತು.

ಮಾಂಝಿ ಮೇಲಿರುವ ಆರೋಪವೇನು?: ಸಾಂಪ್ರದಾಯಿಕ ವೈದ್ಯರಾಗಿರುವ ಹೇಮಚಂದ್ ಮಾಂಝಿ ಅವರು ಛೋಟೆಡೊಂಗರ್‌ನಲ್ಲಿನ ಆಮ್ಡೈ ಘಾಟಿ ಕಬ್ಬಿಣದ ಅದಿರು ಯೋಜನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತು ಅದಕ್ಕೆ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ನಕ್ಸಲರು ಆರೋಪಿಸಿದ್ದಾರೆ. ಆ ಆರೋಪಗಳನ್ನು ಮಾಂಝಿ ಅವರು ನಿರಾಕರಿಸಿದ್ದಾರೆ. ಮಾಂಝಿ ಅವರು ಇಂದು ಈ ಬಗ್ಗೆ ಮಾತನಾಡಿದ್ದು, ನಾನು ಈ ವಿಷಯದಲ್ಲಿ ಮುಗ್ಧ. ನಾನು ಯಾವುದೇ ಗಣಿಗಾರಿಕೆಯೊಂದಿಗೆ ಭಾಗಿಯಾಗಿಲ್ಲ ಎಂದಿದ್ದಾರೆ.

ವಿವಿಧ ಕಾಯಿಲೆಗಳಿಗೆ, ವಿಶೇಷವಾಗಿ ಕ್ಯಾನ್ಸರ್‌ಗೆ ಗಿಡಮೂಲಿಕೆ ಪರಿಹಾರಗಳನ್ನು ಒದಗಿಸುವುದು ಸೇರಿದಂತೆ ಅವರ ಜೀವಮಾನದ ಸೇವೆಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net