

ಶ್ರೀಕಾಕುಲಂ: ಕರೊನಾ ವೈರಸ್ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಲವರ ಬದುಕನ್ನು ಕಿತ್ತುಕೊಂಡಿದ್ದೆ. ಬಡವರ ತುತ್ತನ್ನೂ ಕಸಿದುಕೊಂಡಿದೆ. ಆದರೇನಂತೆ... ನಿರ್ಗತಿಕರಿಗೆ ದಾನ ನೀಡುವ ಕೈಗಳಿನ್ನೂ ಬಲಶಾಲಿಯಾಗಿವೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ...
ಲಾಕ್‌ಡೌನ್ ಅವಧಿಯಲ್ಲಿ ಭಿಕ್ಷುಕರು ಹಸಿವಿನಿಂದ ಬಳಲುತ್ತಿರುವುದನ್ನು ನೋಡಿ, ನಿವೃತ್ತ ಎಂಜಿನಿಯರ್ ಒಬ್ಬರು ಕಳೆದ ನಾಲ್ಕು ತಿಂಗಳಿನಿಂದ ಸಿ.ವಿ.ನಾಗಜ್ಯೋತಿ ಚಾರಿಟೇಬಲ್ ಟ್ರಸ್ಟ್ ಅಡಿ ಅನ್ನದಾನ ಮಾಡುತ್ತಿದ್ದಾರೆ.
ಶ್ರೀಕಾಕುಲಂನಲ್ಲಿರುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ಐಆರ್ಸಿಎಸ್) ಇದನ್ನು ನಿರ್ವಹಿಸುತ್ತಿದೆ. ರೆಡ್ ಕ್ರಾಸ್ ಸ್ವಯಂಸೇವಕರು ಶ್ರೀಕಾಕುಲಂನಲ್ಲಿ ಭಿಕ್ಷುಕರು ಮತ್ತು ಕುಷ್ಠರೋಗ ರೋಗಿಗಳಿಗೆ ನಿಯಮಿತವಾಗಿ ಅನ್ನದಾನ ಮಾಡುತ್ತಿದ್ದು, ನೂರಾರು ಭಿಕ್ಷುಕರಿಗೆ ಇದು ವರದಾನವಾದಂತಾಗಿದೆ.
ಲಾಕ್‌ಡೌನ್ ಆರಂಭಿಕ ಅವಧಿಯಲ್ಲಿ, ಹಸಿವಿನಿಂದ ಬಳಲುತ್ತಿದ್ದ ಅಸಹಾಯಕರಿಗೆ ಅನ್ನದಾನ ಮಾಡುತ್ತಿದ್ದ ಹಲವು ಸ್ವಯಂಪ್ರೇರಿತ ಸಂಸ್ಥೆಗಳು ಲಾಕ್‌ಡೌನ್ ತೆರವುಗೊಂಡ ಅವುಗಳ ಪೈಕಿ ಹಲವು ಸಂಘಗಳು ಅನ್ನದಾನ ಮಾಡುವುದನ್ನು ನಿಲ್ಲಿಸಿದವು, ಆದರೆ ಈ ಟ್ರಸ್ಟ್ ಮಾತ್ರ ತನ್ನ ಸೇವೆಯನ್ನು ಮುಂದುವರಿಸಿದೆ.
ಭಿಕ್ಷುಕರು ಭಿಕ್ಷೆಗಾಗಿ ಸೇರುವ ದೇವಾಲಯಗಳೂ ಮುಚ್ಚಲ್ಪಟ್ಟಿದ್ದರಿಂದ ಅವರು ಆಹಾರವಿಲ್ಲದೆ ಕಂಗೆಟ್ಟಂತಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಬಡವರಿಗೆ ಆಹಾರವನ್ನು ನೀಡುತ್ತಿರುವ ನಿವೃತ್ತ ಮುಖ್ಯ ಎಂಜಿನಿಯರ್ ಸಿವಿಎನ್ ಮೂರ್ತಿಯನ್ನು ಸಂಪರ್ಕಿಸಿ ಈ ಕುರಿತು ಪ್ರಸ್ತಾಪಿಸಿದ್ದೆವು. ಇದಕ್ಕೆ ಸ್ಪಂದಿಸಿದ ಅವರು ಭಿಕ್ಷುಕರು ಮತ್ತು ಇತರರಿಗೆ ಆಹಾರ ನಿಡಲು ಪ್ರತಿ ತಿಂಗಳು ತಮ್ಮ ಪಿಂಚಣಿ ಮೊತ್ತದಿಂದ 50,000 ರೂ. ನೀಡುತ್ತಿದ್ದಾರೆ.
ಶ್ರೀಕಾಕುಲಂನ ಪಿ.ಎನ್ ಕಾಲೋನಿಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಹಾರವನ್ನು ತಯಾರಿಸಲಾಗುತ್ತಿದ್ದು, ಶ್ರೀಕಾಕುಲಂನಲ್ಲಿ ನಾವು ಪ್ರತಿದಿನ ನೂರಾರು ಜನರಿಗೆ ಆಹಾರವನ್ನು ನೀಡುತ್ತೇವೆ ಐಆರ್ಸಿಎಸ್ ಮುಖ್ಯಸ್ಥ ಪಿ. ಜಗನ್ಮೋಹನ್ ರಾವ್ ತಿಳಿಸಿದ್ದಾರೆ.
ನಾವು ಪ್ರತಿ ತಿಂಗಳು 65 ಸಾವಿರ ರೂ. ವಿನಿಯೋಗಿಸುತ್ತಿದ್ದೇವೆ. 50 ಸಾವಿರ ರೂ. ಗಳನ್ನು ಮೂರ್ತಿಯವರು ಭರಿಸುತ್ತಿದ್ದಾರೆ. ಉಳಿದ ಮೊತ್ತವನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಾನಿಗಳು ಭರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.