ಉತ್ತಮ ಗುಣಮಟ್ಟದ ಕಾಫಿ ಬೆಳೆಯಲು ಆತ್ಮ ನಿರ್ಭರ್ ಯೋಜನೆಯಡಿ ನೆರವಾಗಿ; ರಾಮನಾಥನ್ ಆಗ್ರಹ

MDK07
Published on

ಮಡಿಕೇರಿ: ಕಾಫಿ ಉದ್ಯಮದಲ್ಲಿ ನವನವೀನ ತಾಂತ್ರಿಕತೆ ಬಳಸಿಕೊಂಡು ಅತ್ಯುತ್ತಮ ಗುಣಮಟ್ಟದ ಕಾಫಿ ಉತ್ಪಾದನೆಗೆ ಮೇಕ್ ಇನ್ ಇಂಡಿಯಾ ಯೋಜನೆಯ ಪ್ರಯೋಜನಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ರಾಮನಾಥನ್ ಆಗ್ರಹಿಸಿದರು.


ವಿವಿಧ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಷಿ ಮತ್ತು ತೋಟಗಾರಿಯಾ ಯಂತ್ರೋಪಕರಣಗಳನ್ನು ಭಾರತದ ಹವಾಗುಣಕ್ಕೆ ಸರಿಹೊಂದುವಂತೆ ದೇಶೀಯವಾಗಿಯೇ ಆತ್ಮನಿರ್ಭರ್ ಯೋಜನೆಯಡಿ ಉತ್ಪಾದಿಸಲು ಸಾಧ್ಯವಾಗುವಂತೆ ಯೋಜನೆ ರೂಪಿಸಬೇಕಾಗಿದೆ. ತೋಟ ಮತ್ತು ಕಾರ್ಮಿಕರ ನಿರ್ವಹಣೆಯ ಅಧಿಕ ವೆಚ್ಚದಿಂದ ಬೆಳೆಗಾರರು ಪಾರಾಗಲು ಸಾಧ್ಯವಾಗಲಿದೆ. ಅಂತೆಯೇ ಕೃಷಿ ಮತ್ತು ತೋಟಗಾರಿಕಾ ಉಪಕರಣಗಳ ಮೇಲೆ ಈಗಿರುವ ವಾಣಿಜ್ಯ ತೆರಿಗೆಯ ಹೊರೆಯನ್ನೂ ಕಡಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಸರ್ಕಾರಗಳು ಆಗಿಂದಾಗ್ಗೆ ಜಾರಿಗೆ ತರುತ್ತಿರುವ ಕಷಿ ಭೂಮಿ ಹಾಗೂ ಪರಿಸರ ಸಂಬಂಧಿತ ಕಾಯ್ದೆಗಳು ಬೆಳೆಗಾರ ವಲಯದಲ್ಲಿ ಗೊಂದಲ ಮತ್ತು ಸಮಸ್ಯೆ ಸಷ್ಟಿಸುತ್ತಿದೆ. ಇಂಥ ಕೆಲವು ನಿಯಮಗಳಿಂದಾಗಿ ತೋಟಗಳ ಮೇಲೆ ಹೆಚ್ಚು ವೆಚ್ಚ ಮಾಡಲು ಬೆಳೆಗಾರರು ಹಿಂಜರಿಯುವಂತಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾಲಕ್ಕೂ ಸಲ್ಲುವ ಸ್ಪಷ್ಟ ಕಾಯ್ದೆಯ ಅಗತ್ಯವಿದೆ ಎಂದು ಹೇಳಿದರು.


ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿ ಮಂಡಳಿ ಸಹಯೋಗದೊಂದಿಗೆ ಉತ್ತಮ ಕಾಫಿಯನ್ನು ಒದಗಿಸಬೇಕು. ಎಲ್ಲಾ ಸರ್ಕಾರಿ, ಸರ್ಕಾರೇತರ ಕಛೇರಿಗಳಲ್ಲಿಯೂ ಉತ್ತಮ ಕಾಫಿಯುವ ಸೇವನೆಗೆ ದೊರಕುವಂತಾಗಬೇಕೆಂಕು ರಾಮನಾಥನ್ ಸಲಹೆ ನೀಡಿದರು.


ರಾಜ್ಯದ ಕಾಫಿ ಜಿಲ್ಲೆಗಳಲ್ಲಿ ಬೆಳೆಗಾರರಿಗೆ ಅಗತ್ಯವಾಗಿರುವ ವಿದ್ಯುತ್, ರಸ್ತೆ, ಮೊಬೈಲ್, ಇಂಟರ್ ನೆಟ್ ಸೌಲಭ್ಯಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿದೆ. ಹಲವಾರು ವ್ಯವಸ್ಥೆಗಳನ್ನು ಸರ್ಕಾರ ಡಿಜಿಟಲೀಕರಣಗೊಳಿಸಿರುವ ಹಿನ್ನಲೆಯಲ್ಲಿ ಬೆಳೆಗಾರರ ಪ್ರಯೋಜನಕ್ಕಾಗಿ ಈ ಸೌಲಭ್ಯಗಳನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸುವತೆ ಅವರು ಸರ್ಕಾರಕ್ಕೆ ಸಲಹೆ ನೀಡಿದರು.


ದಕ್ಷಿಣ ಭಾರತ ಬೆಳೆಗಾರರ ಸಂಘದ (ಉಪಾಸಿ) ಅಧ್ಯಕ್ಷ ಜೆಫ್ರಿ ರೆಬೆಲ್ಲೋ ಮಾತನಾಡಿ, ಅತ್ಯಧಿಕ ಸಂಖ್ಯೆಯಲ್ಲಿ ವಿದೇಶಿ ಮೂಲದ ಕಾಫಿ ಸಂಸ್ಥೆಗಳು ಭಾರತದಲ್ಲಿ ಕಾಫಿ ಕೆಫೆಯನ್ನು ಪ್ರಾರಂಭಿಸುತ್ತಿರುವ ದಿನಗಳಲ್ಲಿ ಕೇಂದ್ರ ಸರ್ಕಾರವು ಸ್ಥಳೀಯವಾಗಿ ಕಾಫಿ ಸಂಸ್ಕತಿಗೆ ಹೆಚ್ಚು ಒತ್ತು ನೀಡುವಂಥ ಯೋಜನೆ ರೂಪಿಸಬೇಕು. ಬೆಳೆಗಾರರಿಗೆ ಬಹಳ ಪ್ರಯೋಜನಕಾರಿಯಾಗಿದ್ದ ಹಲವಾರು ಯೋಜನೆಗಳನ್ನು ಕಾಫಿ ಮಂಡಳಿಯುವ ಪುನರ್ ಜಾರಿಗೊಳಿಸುವಂತೆ ಒತ್ತಾಯಿಸಿದರು.


ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಕಾಫಿ ಬೆಳೆಗಾರರ ಹಿತಾಸಕ್ತಿ ಕಾಯುವಲ್ಲಿ ಎಲ್ಲಾ ಸಂಸ್ಥೆಗಳೂ ಒಗ್ಗೂಡಿ ಕಾರ್ಯನಿರ್ವಹಿಸುತ್ತಿದೆ. ಶೇ.೯೦ ರಷ್ಟಿರುವ ಸಣ್ಣ ಬೆಳೆಗಾರರ ಹಿತಾಸಕ್ತಿಯನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ. ಸಣ್ಣ ಬೆಳೆಗಾರರ ಹಿತವನ್ನು ಖಂಡಿತಾ ಕಡೆಗಾಣಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾಫಿ ಮಂಡಳಿಯಲ್ಲಿ ಹಲವಾರು ಅಧಿಕಾರಿಗಳು, ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದಿರುವ ಹಿನ್ನಲೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಮಂಡಳಿಯನ್ನು ತೀವ್ರವಾಗಿ ಬಾಧಿಸುತ್ತಿದೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಉಪಾಸಿ ಕಾರ್ಯದರ್ಶಿ ಆರ್.ಸಂಜಿತ್, ಕರ್ನಾಟಕ ಬೆಳೆಗಾರರ ಸಂಘದ ಕಾರ್ಯದರ್ಶಿ ಡಿ.ಅನಿಲ್ ಸವೂರು, ಉಪಾಸಿ ಕಾಫಿ ಸಮಿತಿ ಅಧ್ಯಕ್ಷ ಅಜೋಯ್ ತಿಪ್ಪಯ್ಯ ಹಾಜರಿದ್ದರು.


ಭಾರತದ ಶೇ.೫೩ ರಷ್ಟು ಕಾಫಿ ಬೆಳೆಯುವ ಕರ್ನಾಟಕದಲ್ಲಿ ಪ್ರಸ್ತುತ ೧೬೭.೨ ಮಿಲಿಯನ್ ಚೀಲ ಕಾಫಿ ಬೆಳೆಯಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೨.೧ ಕಡಮೆ ಉತ್ಪಾದನೆಯಾಗಿದೆ. ಅರೆಬಿಕಾ ಕಾಫಿ ೯೩ ಮಿಲಿಯನ್ ಬ್ಯಾಗ್ ಬೆಳೆಯಲಾಗಿದ್ದರೆ, ರೋಬಸ್ಟಾ ಕಾಫಿ ೭೩,೨೦೦ ಮಿಲಿಯನ್ ಬ್ಯಾಗ್ ಉತ್ಪಾದನೆಯಾಗಿದೆ. ಕಾಫಿ ಮಂಡಳಿ ಅಂದಾಜಿನ ಪ್ರಕಾರ ೨೦೨೧-೨೨ನೇ ಸಾಲಿನಲ್ಲಿ ೩,೪೨,೦೦೦ ಕಾಫಿ ಉತ್ಪಾದನೆ ಭಾರತದಲ್ಲಿ ಆಗಿದ್ದು, ಈ ವರ್ಷ ಅಧಿಕ ಮಳೆಯಂಥ ಪ್ರಾಕತ್ತಿಕ ವೈಪರೀತ್ಯದ ಕಾರಣಗಳಿಂದಾಗಿ ಶೇ.೩೫ ಕಡಿಮೆ ಉತ್ಪಾದನೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಕಳೆದ ಸಾಲಿನಲ್ಲಿ ೩೦ ಮೆಟ್ರಿಕ್ ಟನ್ ಕರಿಮೆಣಸು ಬೆಳೆಯಲಾಗಿದ್ದು ಭಾರತದಲ್ಲಿ ೬೦ ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ.
-ಎನ್.ರಾಮನಾಥನ್, ಅಧ್ಯಕ್ಷರು, ಕರ್ನಾಟಕ ಬೆಳೆಗಾರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net