

ಶಿವಮೊಗ್ಗ: ಬೌದ್ಧಿಕ ಅಸಾಮರ್ಥ್ಯವುಳ್ಳ ಮಕ್ಕಳನ್ನು ಸಮಾಜ ಅತ್ಯಂತ ಎಚ್ಚರಿಕೆಯಿಂದ ನೋಡಬೇಕು. ಅವರನ್ನು ಅನುಕಂಪದಿಂದ ಕಾಣುವ ಬದಲು ನೆರವು ನೀಡುವುದು ಮುಖ್ಯ. ಕ್ರೀಡೆ, ವ್ಯಾಸಂಗ ಮುಂತಾದ ಚಟುವಟಿಕೆಗಳ ಮೂಲಕ ಆ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಬಹುದಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಹೇಳಿದರು.
ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ, ಸಕ್ಷಮ, ಮನಸ್ಫೂರ್ತಿ, ಸರ್ಜಿ ೌಂಡೇಷನ್, ಕ್ರೀಡಾಭಾರತಿ, ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಬೌದ್ಧಿಕ ಅಸಮರ್ಥ ಮಕ್ಕಳ ಫ್ಲೋರ್‌ಬಾಲ್ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗವಿಕಲರ ಕ್ರೀಡೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಹಲವು ಕಾರಣಗಳಿಂದ ಬೌದ್ಧಿಕ ಅಸಮರ್ಥ ಮಕ್ಕಳು ಜನಿಸುತ್ತಿದ್ದಾರೆ. ಮಹಿಳೆಯರು ಗರ್ಭಿಣಿಯಾಗಿರುವಾಗಲೇ ಅವರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಮತ್ತು ವಿಶೇಷ ಚಿಕಿತ್ಸೆಗಳ ಮೂಲಕ ಇಂತಹ ಮಕ್ಕಳ ಜನನ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದು ಹೇಳಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಸರ್ಜಿ ೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಪ್ರತಿ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅದರಲ್ಲೂ ಅಂಗವಿಕಲರಿಗೆ ಪ್ರತಿಭೆ ಎಂಬುದು ದೇವರು ಕೊಟ್ಟ ವರವಾಗಿದೆ. ನಮ್ಮ ಸಮಾಜ ಅಂಗವಿಕಲರನ್ನು ಕೀಳರಿಮೆಯಿಂದ ನೋಡಬಾರದು ಎಂದರು.
ಕ್ರೀಡೆಯಲ್ಲಿ ಎಲ್ಲರೂ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿಲ್ಲ. ಆದರೆ ಆ ಸ್ಥಾನಕ್ಕಾಗಿ ಕ್ರೀಡಾ ಮನೋಭಾವದ ಸ್ಪರ್ಧೆ ಇರಬೇಕು. ಈ ಹಿನ್ನೆಲೆಯಲ್ಲಿ ತರಬೇತಿ ಶಿಬಿರಗಳು ಮನೋಸ್ಥೈರ್ಯ ಹೆಚ್ಚಿಸುತ್ತವೆ. ಸಮಾಜ ಅಂಗವಿಕಲರಿಗೆ ಅನುಕಂಪ ತೋರಿಸುವ ಬದಲು ಅವಕಾಶ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಮಾನಸ ಟ್ರಸ್ಟ್‌ನ ಅಧ್ಯಕ್ಷೆ ಡಾ.ರಜನಿ ಪೈ, ಪ್ರಮುಖರಾದ ಡಾ.ನಾಗರಾಜ್, ಕುಮಾರ ಶಾಸ್ತ್ರಿ, ಕೆ.ರವೀಂದ್ರಕುಮಾರ್, ಡಿ.ಎಸ್. ನಟರಾಜ್, ಎ.ಮಂಜುನಾಥ್, ಶಾಂತಲಾ, ಡಾ.ಪ್ರಶಾಂತ್ ಇಸ್ಲೂರ್ ಮುಂತಾದವರಿದ್ದರು.