ನಾಡಹಬ್ಬ ದಸರಾ ಆಕರ್ಷಕವಾಗಿಸಲು ಸಹಕರಿಸಿ

dasara-lighting-3-1
Published on

ಮೈಸೂರು: ಈ ಬಾರಿಯ ನಾಡಹಬ್ಬ ದಸರೆಯನ್ನು ಮತ್ತಷ್ಟು ಆಕರ್ಷಕವಾಗಿ ಮಾಡಿ, ಮೈಸೂರಿನ ಭವ್ಯ ಪರಂಪರೆ, ಇತಿಹಾಸವನ್ನು ವಿಶ್ವಕ್ಕೆ ತಿಳಿಸುವ ಕೆಲಸ ಮಾಡಲಾಗುವುದು. ಇದಕ್ಕೆ ಉದ್ಯಮಿಗಳು ಕೈ ಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದ ಲಲಿತಮಹಲ್ ಅರಮನೆಯಲ್ಲಿ ಬುಧವಾರ ದಸರಾ ಪ್ರಾಯೋಜಕತ್ವ ಸಂಬಂಧ ಆಯೋಜಿಸಿದ್ದ ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಹೀಗಾಗಿ ಈ ಬಾರಿಯ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲರೂ ಒಂದು ಕುಟುಂಬದಂತೆ ಒಟ್ಟಾಗಿ ದಸರಾ ದಸರಾವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ರಾಜರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದ್ದು, ಸ್ವಾತಂತ್ರೃ ನಂತರ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ದಸರಾ ನಮ್ಮೆಲ್ಲರ ಕಾರ್ಯಕ್ರಮ. ದಸರಾ ಯಶಸ್ಸಿನಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆಯೂ ಮುಖ್ಯ. ಕಳೆದ ಬಾರಿಯ ನ್ಯೂನತೆಗಳನ್ನು ಸರಿಪಡಿಸಿಕೊಂಡು ಈ ಬಾರಿ ಉತ್ತಮವಾಗಿ ಆಚರಣೆ ಮಾಡಬೇಕು. ಮೈಸೂರಿನ ಹಿರಿಮೆ, ಗರಿಮೆಯನ್ನು ವಿಶ್ವಕ್ಕೆ ತಿಳಿಸಬೇಕು. ಅದಕ್ಕೆ ಉದ್ಯಮಿಗಳ ಸಹಕಾರ ಮುಖ್ಯ. ಇದರಲ್ಲಿ ಪ್ರಾಯೋಜಕತ್ವ ನೀಡಲೇಬೇಕು ಎಂಬ ಯಾವುದೇ ಒತ್ತಡ ಇಲ್ಲ. ಸ್ವಯಂಪ್ರೇರಿತವಾಗಿ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು ಎಂದು ಕೋರಿದರು.

ಕಳೆದ ಬಾರಿಯ ದಸರಾದಲ್ಲಿ 1.75 ಕೋಟಿ ರೂ. ಪ್ರಾಯೋಜಕತ್ವ ಬಂದಿತ್ತು. ದಸರಾ ಆಚರಣೆಗೆ ಬೇಕಾದ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿದ್ದು, ಪ್ರಾಯೋಜಕತ್ವದೊಂದಿಗೆ ಗುಣಮಟ್ಟದ ಕಾರ್ಯಕ್ರಮ ಆಯೋಜಿಸಲಾಗುವುದು. ನಗರದಲ್ಲಿನ ವಾಹನ ಸಂಚಾರ ದಟ್ಟಣೆ ಸಮಸ್ಯೆ ಸೇರಿದಂತೆ ಎಲ್ಲವನ್ನು ದಸರಾ ವೇಳೆಗೆ ಬಗೆಹರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ದಸರಾ ಯಶಸ್ಸಿನಲ್ಲಿ ಉದ್ಯಮಿಗಳು ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಈ ಬಾರಿಯೂ ನಿಮ್ಮ ಸಹಕಾರದ ನಿರೀಕ್ಷೆ ಇದೆ. ಯಾರು ಎಷ್ಟು ಪ್ರಾಯೋಜಕತ್ವ ನೀಡುತ್ತೀರಿ ಎಂಬುದನ್ನು ನನಗೆ ಅಥವಾ ಪ್ರವಾಸೋದ್ಯಮ ಡಿಡಿಗೆ ತಿಳಿಸಬಹುದು. ಏನಾದರೂ ಬದಲಾವಣೆಯ ಅವಶ್ಯಕತೆ ಇದ್ದರೆ ಅದನ್ನೂ ತಿಳಿಸಿ. ಈ ಬಾರಿಯ ದಸರಾ ಉತ್ಸವ ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದರು ಮನವಿ ಮಾಡಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್ಪಿ ವಿಷ್ಣುವರ್ಧನ್, ಡಿಸಿಪಿ ಜಾಹ್ನವಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಯಾವುದಕ್ಕೆ ಎಷ್ಟು ಪ್ರಾಯೋಜಕತ್ವ?

ಈ ಬಾರಿಯ ದಸರಾ ಉತ್ಸವದಲ್ಲಿ 7 ವಿಭಾಗಗಳಲ್ಲಿ ಪ್ರಾಯೋಜಕತ್ವಕ್ಕೆ ಅವಕಾಶ ನೀಡಲಾಗಿದೆ. ಅದರಲ್ಲಿ ಜಂಬೂಸವಾರಿ ದಿನ ಅರಮನೆ ಸುತ್ತಮುತ್ತಲ ಪ್ರದೇಶಗಳ ಹೋರ್ಡಿಂಗ್ಸ್, ಪ್ರವೇಶದ್ವಾರ, ಜಂಬೂಸವಾರಿ ಟಿಕೆಟ್‌ಗಳನ್ನೊಳಗೊಂಡ ಜಂಬೂಸವಾರಿ ಪ್ರಯೋಜಕತ್ವಕ್ಕೆ 2 ಕೋಟಿ ರೂ., ಯುವ ದಸರಾ ಹೋರ್ಡಿಂಗ್ಸ್, ವೇದಿಕೆಯ ಎಲ್ಇಡಿ ಪರದೆ, ಮೈದಾನದ ಪ್ರವೇಶ ದ್ವಾರಗಳನ್ನೊಳಗೊಂಡ ಅಂಬಾರಿ ಪ್ರಾಯೋಜಕತ್ವಕ್ಕೆ 1 ಕೋಟಿ, ಯುವಸಂಭ್ರಮ, ಆಹಾರ ಮೇಳವನ್ನು ಒಳಗೊಂಡ ಪ್ಲಾಟಿನಂ ಪ್ರಯೋಜಕತ್ವಕ್ಕೆ 75 ಲಕ್ಷ, ಫಲಪುಷ್ಪ ಪ್ರದರ್ಶನ, ಲಲಿತಮಹಲ್ ಬಳಿಯ ಆಹಾರ ಮೇಳ, ದಸರಾ ಚಲನಚಿತ್ರೋತ್ಸವವನ್ನೊಳಗೊಂಡ ಗೋಲ್ಡನ್ ಪ್ರಾಯೋಜಕತ್ವಕ್ಕೆ 50 ಲಕ್ಷ, ದಸರಾ ಕ್ರೀಡೆ, ನಂಜನಗೂರು ದೇವಸ್ಥಾನದ ವೇದಿಕೆ, ಕುಸ್ತಿ, ದೀಪಾಲಂಕಾರವನ್ನೊಳಗೊಂಡ ಸಿಲ್ವರ್ ಪ್ರಾಯೋಜಕತ್ವಕ್ಕೆ 25 ಲಕ್ಷ ರೂ. ನಿಗದಿ ಮಾಡಲಾಗಿದೆ. ಜತೆಗೆ ಮಹಿಳಾ ಮತ್ತು ಮಕ್ಕಳ ದಸರಾ, ರೈತ ದಸರಾ, ಲಲಿತಕಲೆ, ಕಲಾಮಂದಿರ, ಜಗನ್ಮೋಹನ ಅರಮನೆ ವೇದಿಕೆಗೆ 5 ಲಕ್ಷ ರೂ., ಎಲ್‌ಇಡಿ ಡಿಸ್‌ಪ್ಲೇ, ಬಿಲ್ಬೋರ್ಡ್, ಡಿಜಿಟಲ್ ಬೋರ್ಡ್‌ಗಳಿಗೆ ಪ್ರಾಯೋಜಕತ್ವ ನೀಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net