ಅಂಗವಿಕಲ ಮಕ್ಕಳು ಉತ್ತಮ ಸಾಧನೆ ಮಾಡುವತ್ತ ಮುನ್ನಡೆಯಿರಿ

29.Pyp. 01
ಪಿರಿಯಾಪಟ್ಟಣದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು. ನಿತಿನ್ ವೆಂಕಟೇಶ್, ರವಿ ಪ್ರಸನ್ನ, ಸಚಿನ್, ಈ.ಪಿ.ಲೋಕೇಶ್, ಪುಟ್ಟರಾಜು ಇತರರು ಇದ್ದರು.
Published on

ಪಿರಿಯಾಪಟ್ಟಣ: ಅಂಗವಿಕಲ ಮಕ್ಕಳು ತಮ್ಮಲ್ಲಿರುವ ನ್ಯೂನ್ಯತೆಗಳಿಗೆ ಅಂಜದೆ ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಸಾಧನೆ ಮಾಡುವತ್ತ ಮುನ್ನುಗ್ಗಬೇಕು ಎಂದು ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಕಚೇರಿಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನ ಚಟುವಟಿಕೆ ಅಂಗವಾಗಿ ಶಾಲೆಗೆ ದಾಖಲಾದ ಅಂಗವಿಕಲ ಮಕ್ಕಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿ, ಅಂಗವಿಕಲರ ಮಕ್ಕಳು ಸಾಕಷ್ಟು ಗಂಭೀರ ನ್ಯೂನ್ಯತೆಗಳಿಂದ ಬಳಲುತ್ತಿರುತ್ತಾರೆ. ಅವರ ಜೀವನದ ಅಭಿವೃದ್ಧಿಗಾಗಿ ಸರ್ಕಾರ ಮತ್ತು ವಿವಿಧ ಇಲಾಖೆಯು ಸಾಕಷ್ಟು ಯೋಜನೆ ಹಾಗೂ ಅನುದಾನಗಳನ್ನು ಜಾರಿಗೆ ತರುತ್ತಿದ್ದು ಇವುಗಳನ್ನು ತಲುಪಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮತ್ತು ಪ್ರತಿಯೊಬ್ಬ ಅಧಿಕಾರಿಯೂ ಮಾಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಮಾತನಾಡಿ, ತಾಲೂಕಿನ ವಿವಿಧ ಶಾಲೆಗಳಲ್ಲಿ ಒಟ್ಟು 328 ಅಂಗವಿಕಲ ಮಕ್ಕಳು ದಾಖಲಾಗಿದ್ದು ಅವರ ಅವಶ್ಯಕತೆ ಮತ್ತು ನ್ಯೂನ್ಯತೆಗಳಿಗೆ ಅನುಗುಣವಾಗಿ ಸಲಕರಣೆಗಳನ್ನು ಇಲಾಖೆಯು ಪ್ರತಿವರ್ಷ ನೀಡುತ್ತಿದೆ ಎಂದರು.

ಕಳೆದ ಸಾಲಿನಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಅಧ್ಯಯನದಲ್ಲಿ ಆಯ್ಕೆಯಾದ ಮಕ್ಕಳಿಗೆ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಇವರಿಗೆ ಮನೆಯಲ್ಲಿಯೇ ಪಾಠ ಮಾಡಲಾಗುವುದು. ಸಾರಿಗೆ ಭತ್ಯೆ, ಬೆಂಗಾವಲು ಭತ್ಯೆ, ಓದುಗರ ಭತ್ಯೆ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹನ್ನೆರಡು ವಿದ್ಯಾರ್ಥಿಗಳಿಗೆ ಶ್ರವಣ ಸಾಧನ, ಆರು ವಿದ್ಯಾರ್ಥಿಗಳಿಗೆ ವ್ಹಿಲ್ ಚೇರ್, ಇಬ್ಬರು ವಿದ್ಯಾರ್ಥಿಗಳಿಗೆ ಸಿಪಿ ಚೇರ್, ಇಪ್ಪತ್ತು ವಿದ್ಯಾರ್ಥಿಗಳಿಗೆ ಎಂಆರ್ ಕಿಟ್, ಇಬ್ಬರು ವಿದ್ಯಾರ್ಥಿಗಳಿಗೆ ಯಂತ್ರಚಾಲಿತ ತ್ರಿಚಕ್ರ ಸೈಕಲ್, ಆರು ವಿದ್ಯಾರ್ಥಿಗಳಿಗೆ ಎಲ್ಬೋ ಕ್ರಚರ್ಸ್ ವಿತರಿಸಲಾಯಿತು.

ಎಂಡಿಸಿಸಿ ಜಿಲ್ಲಾ ಬ್ಯಾಂಕ್ ನಿರ್ದೇಶಕ ಈ.ಪಿ.ಲೋಕೇಶ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಶಿವರಾಜ್, ಕಿತ್ತೂರು ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಸಚಿನ್, ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಪುಟ್ಟರಾಜು, ಶಿಕ್ಷಕರಾದ ಭಾಸ್ಕರ್, ರಾಮಯ್ಯ, ಮನೋಹರ್, ರವೀಂದ್ರ, ನಟರಾಜ್, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net