

ಎಚ್.ಡಿ.ಕೋಟೆ : ವಾಹನ ಅಪಘಾತದಿಂದ ಇತ್ತೀಚೆಗೆ ಮೃತಪಟ್ಟ ಕರಿಗಳ ಗ್ರಾಮದ ವೆಂಕಟೇಶ್ ಕುಟುಂಬಕ್ಕೆ ಚಿಕ್ಕಮಾದು ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಗುರುವಾರ 35, 000 ರೂ. ಧನಸಹಾಯಧನ ನೀಡಿದರು. ಮೃತರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಗದ ಬಳಗದ ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ, ಅಕಾಲಿಕವಾಗಿ ಮೃತಪಟ್ಟ ವೆಂಕಟೇಶ್, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಉತ್ತಮ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ವೆಂಕಟೇಶ್ ಅಗಲಿಕೆ ಪಕ್ಷಕ್ಕೆ ಹಾಗೂ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಅವರು ಹೇಳಿದರು. ಚಿಕ್ಕಮಾದು ಅಭಿಮಾನಿ ಬಳಗದಿಂದ 10 ಸಾವಿರ ರೂ. ಸಂಗ್ರಹ ಮಾಡಲಾಗಿದೆ. ಅಪಘಾತ ಮಾಡಿದ ವ್ಯಕ್ತಿಯಿಂದ 25, 000 ರೂ. ಪಡೆದು ಒಟ್ಟು 35, 000 ರೂ. ಹಸ್ತಾಂತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯವನ್ನೂ ಶಾಸಕರ ಸಹಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದರು.
ಬಳಗದ ಖಜಾಂಚಿ ದಾಸ ನಾಯಕ, ಕಾರ್ಯದರ್ಶಿ ಸಿದ್ದನಾಯಕ, ನಿರ್ದೇಶಕರಾದ ನಿಂಗನಾಯಕ, ನೇರಳೆ ಗೋವಿಂದು, ರವಿ ನಾಯಕ, ಮರಿ ತಿಮ್ಮನಾಯಕ, ಗ್ರಾಪಂ ಸದಸ್ಯರಾದ ರಮೇಶ್, ಯಜಮಾನರಾದ ವೆಂಕಟೇಶ್, ವಿ. ರವಿ ಇತರರು ಹಾಜರಿದ್ದರು.