

ನನಗೆ ಗೊತ್ತಿದ್ದ ಹಾಗೆ ಈ ತರಹ ಶಾಲೆಗೆ ಹೋಗಲು ಮಕ್ಕಳು ದಿಢೀರ್ ಅಂತ ಬಿಡುವುದಿಲ್ಲ. ಅದಕ್ಕೆ ಬಲವಾದ ಕಾರಣ ಇರುತ್ತದೆ. ಮೊದಲೇ ಮಕ್ಕಳು. ಮನಸ್ಸು ಇನ್ನೂ ಎಳೆಯದು. ಆದರೆ ಬಲವಾದ ಸನ್ನಿವೇಶದಲ್ಲಿ ಅವಮಾನ ಸಹಿಸಲು ಅವರಿಂದ ಆಗುತ್ತಿಲ್ಲ. ಅದನ್ನೇ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸುತ್ತಾರೆ. ನನಗೆ ಕರೆ ಮಾಡಿದ ಪಾಲಕರ ಪ್ರಕರಣದಲ್ಲಿ ಆದದ್ದೂ ಅದೇ. ಅವರ ಮಗ ಎಂದಿನಂತೆ ಶಾಲೆಗೆ ಹೋಗಿದ್ದಾನೆ. ಅಲ್ಲಿ ಶಿಕ್ಷಕರು ಓದಿನ ವಿಷಯಕ್ಕೆ ಈತನ ಕಳಪೆ ಸಾಧನೆ ನೋಡಿ ಬೈದಿದ್ದಾರೆ. ಜತೆಗೆ ಶಿಕ್ಷೆ ಕೊಟ್ಟಿದ್ದಾರೆ. ಈ ಶಿಕ್ಷೆಯಿಂದ ಬಾಲಕನಿಗೆ ಅವಮಾನವಾದಂತಾಗಿದೆ. ಶಿಕ್ಷಕರ ಮೇಲೆ ಆತನಿಗೆ ಇನ್ನಿಲ್ಲದ ಸಿಟ್ಟು. ಈ ಕಾರಣಕ್ಕೆ ಆತ ಶಾಲೆ ಎಂದರೆ ಮೂಗು ಮುರಿಯುತ್ತಿದ್ದಾನೆ. ಅದನ್ನು ಆತ ಬಹಿರಂಗವಾಗಿ ಹೇಳುತ್ತಿಲ್ಲ. ಆದರೆ ಶಿಕ್ಷಕರು ಬದಲಾಗಬೇಕು. ಅವರಿದ್ದರೆ ನಾನು ಹೋಗುವುದಿಲ್ಲ ಎಂದು ಹೇಳುತ್ತಾನೆ. ಯಾಕೆ ಹೀಗೆ ಎಂಬ ವಿಷಯ ಬೆನ್ನತ್ತಿದ ಪಾಲಕರಿಗೆ ನಂತರ ಈ ವಿಷಯ ತಿಳಿದು ಬಂದಿದೆ. ಇಂತಹ ಸನ್ನಿವೇಶದಲ್ಲಿ ಪಾಲಕರಾದವರು ಮಕ್ಕಳಪರ ನಿಲ್ಲುವ ಮೊದಲು ಒಂದು ಬಾರಿ ವಾಸ್ತವ ಅರಿತು ವಿಚಾರಣೆ ಮಾಡುವುದು ಸೂಕ್ತ ಮತ್ತು ಸರಿ. ಏಕೆಂದರೆ ಇಲ್ಲಿ ಶಿಕ್ಷಕರು ಕೊಟ್ಟ ಶಿಕ್ಷೆಯ ಹಿಂದಿನ ಉದ್ದೇಶ ಆತ ಸುಧಾರಿಸಲಿ ಎಂಬುದಾಗಿದೆ. ಇದನ್ನು ಅರ್ಥೈಸಿಕೊಳ್ಳುವುದನ್ನು ಬಿಟ್ಟು ಶಿಕ್ಷಕರ ವಿರುದ್ಧ ಸೇಡು ಮನೋಭಾವ ಸಲ್ಲದು. ಇದು ಪರಿಹಾರವೂ ಅಲ್ಲ.
ಅದೊಂದು ಕಾಲವಿತ್ತು. ಶಾಲೆಯಲ್ಲಿ ಶಿಕ್ಷೆ ಕೊಟ್ಟಿರುವ ವಿಚಾರವನ್ನು ಮಕ್ಕಳು ಮನೆಗೆ ಬಂದು ಹೇಳುತ್ತಿರಲಿಲ್ಲ. ಏಕೆಂದರೆ ಮನೆಯಲ್ಲಿ ಹೇಳಿದರೆ ಇಲ್ಲೂ ಶಿಕ್ಷೆ ಕಟ್ಟಿಟ್ಟಬುತ್ತಿಯಾಗಿರುತ್ತಿತ್ತು.
ಇನ್ನೊಂದು ಪ್ರಕರಣ ನಡೆದದ್ದು ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ. ಬಲು ದೊಡ್ಡ ವೇದಿಕೆ. 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ನಾನು ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ. ವೇದಿಕೆಯಲ್ಲಿ ನನ್ನ ಜತೆ ಮುಖ್ಯೋಪಾಧ್ಯಾಯರು, ಶಾಲೆ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಸಂಸತ್ತಿನ ಪ್ರಧಾನಿ(ವಿದ್ಯಾರ್ಥಿ) ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಓರ್ವ ಬಾಲಕಿ ಒಳ್ಳೆಯ ನೃತ್ಯ ಮಾಡಿದಳು. ಆಕೆಯ ನೃತ್ಯ ಮುಗಿಯುತ್ತಿದ್ದಂತೆ ಅನೇಕ ಮಕ್ಕಳು ಸಿಳ್ಳೆ, ಕೇಕೆ ಹಾಕಿದರು. ಇದೇಕೋ ನನಗೆ ಸರಿ ಎನಿಸಲಿಲ್ಲ. ಈ ಮಧ್ಯೆ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನುದ್ದೇಶಿಸಿ ನಾಲ್ಕು ಹಿತನುಡಿ ಆಡಲು ಹೇಳಿದರು. ಇದಕ್ಕೆ ನಾನು ನಿರಾಕರಿಸಿದೆ. ಯಾಕೆಂದರೆ ಆ ಶಾಲೆಯ ಒಳಗೆ ಹೋಗುವಾಗ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ನಾಮ ಫಲಕವನ್ನೂ ನಾನು ನೋಡಿದ್ದೆ, ವಿದ್ಯಾರ್ಥಿಗಳ ಈ ತರಹದ ಅನುಚಿತ ವರ್ತನೆಯಿಂದ ನನ್ನ ಮನಸ್ಸಿಗೆ ಬಹಳ ನೋವು ಊಂಟಾಯಿತು.
ಆಗ ನಾನು ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಕುಳಿತಿರುವೆನೋ, ಸಿನಿಮಾ ಥೇಟರ್ನಲ್ಲೋ ಎಂಬಂತೆ ಅನಿಸುತ್ತಿತ್ತು. ಈ ಸಂದೇಶವನ್ನು ಮುಖ್ಯೋಪಾಧ್ಯಾಯರಿಗೆ ಹಾಗೂ ಶಾಲಾ ವಿದ್ಯಾರ್ಥಿ ಸಂಸತ್ತಿನ ಪ್ರತಿನಿಧಿಗೆ ತಿಳಿಸಿದೆ. ಆಗ ಅವರಿಗೆ ಮನವರಿಕೆಯಾಗಿ ಎಚ್ಚೆತ್ತುಕೊಂಡು ಕೂಡಲೇ ಎದ್ದು ನಿಂತವನೇ ನಿಮ್ಮೆಲ್ಲರ ವರ್ತನೆ ಅನುಚಿತ. ಹೀಗಾಗಬಾರದಿತ್ತು. ಇನ್ನು ಮುಂದೆಂದೂ ಈ ತರಹ ಅನುಚಿತವಾಗಿ ವರ್ತಿಸುವುದಿಲ್ಲ ಎಂದು ಎಲ್ಲರೂ ಅತಿಥಿಗಳ ಎದುರು ಶಪಥ ಮಾಡೋಣ ಎಂದು ಕೈ ಚಾಚಿ ಪ್ರಮಾಣಕ್ಕೆ ಕರೆ ಕೊಟ್ಟ. ನಂತರ ನಾನು ಅವರನ್ನು ಉದ್ದೇಶಿಸಿ ಮಾತನಾಡಿದೆ. ನೃತ್ಯದ ನಂತರ ಮಕ್ಕಳು ಪೋ›ತ್ಸಾಹಿಸಲು ಚಪ್ಪಾಳೆ ಹೊಡೆಯಬಹುದಿತ್ತಲ್ಲವೇ? ಅಂದಾಗ ‘ಹೌದು ಸರ್ ತಪ್ಪಾಯಿತು’ ಅಂತ ಹೇಳಿದಾಗ ನನಗೆ ಅತ್ಯಂತ ಸಂತೋಷವಾಯಿತು. ಈ ರೀತಿ ಹೇಳುವದರಿಂದ ಸಾಮೂಹಿಕವಾಗಿ ಮಕ್ಕಳ ಮನೋಪರಿವರ್ತನೆ ಮಾಡುವುದು ಸಾಧ್ಯ. ಈ ಬದಲಾವಣೆ ಅಥವಾ ತಪ್ಪೊಪ್ಪಿಗೆ ಮನಸ್ಥಿತಿ ಇಂದಿನ ತುರ್ತು ಅಗತ್ಯ. ಶಿಕ್ಷಕರು ಕೊಟ್ಟ ಶಿಕ್ಷೆಯ ಹಿಂದಿನ ಉದ್ದೇಶ ಅರಿತು ಸಾಗಿದರೆ ಬದುಕು ಉಜ್ವಲವಾಗುವುದರ ಜತೆಗೆ ಭವಿಷ್ಯವೂ ಪ್ರಕಾಶಿಸುತ್ತದೆ.