

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಉತ್ತರಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಬಂಧನದ ಕುರಿತು ಸ್ಥಳೀಯ ಪೊಲೀಸರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಗಡೆ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ. ಅವರನ್ನು ಬಂಧಿಸುವ ಬಗ್ಗೆ ಗೊತ್ತಿಲ್ಲ. ಪ್ರಕರಣ ದಾಖಲಾಗಿರುವುದು ಸತ್ಯ, ಸ್ಥಳೀಯ ಪೊಲೀಸರು ಸಾಕ್ಷ್ಯಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತಾರೆ. ಅರೆಸ್ಟ್ ಮಾಡುವುದು, ಬಿಡುವುದು ಅವರ ವಿಚೇಚನೆಗೆ ಬಿಟ್ಟಿದ್ದು. ಆದರೆ ಯಾರನ್ನಾದರೂ ಬಂಧಿಸಿ ಅಥವಾ ಬಂಧಿಸಿದವರನ್ನು ಬಿಟ್ಟುಬಿಡಿ ಎಂದು ನಾನು ಯಾವತ್ತೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಪೊಲೀಸರು ಕೇಸು ದಾಖಲಿಸಿರುವ ಸೆಕ್ಷನ್ ಅಡಿ ಬಂಧನಕ್ಕೆ ಅವಕಾಶವಿದ್ದರೆ ಬಂಧಿಸುತ್ತಾರೆ. ಅದೇನೆ ಇದ್ದರೂ ಅದು ಅವರ ನಿರ್ಧಾರ ಮಾತ್ರ ಎಂದು ಪರಮೇಶ್ವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಈವರೆಗೂ ಯಾರೂ ಕೇಳಿಲ್ಲ. ಒಂದು ವೇಳೆ ಈ ನಿಟ್ಟಿನಲ್ಲಿ ಬೇಡಿಕೆಗಳು ಬಂದರೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಜೆಟ್‌ಲ್ಯಾಗ್ ಪಬ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಕಾಂಗ್ರೆಸ್ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನಾತ್ಮಕವಾಗಿ ಯಾವುದು ಸೂಕ್ತ, ಯಾವುದು ಕಾನೂನು ಬಾಹಿರ ಎಂಬುದನ್ನು ಸ್ಥಳೀಯ ಪೊಲೀಸರು ಮತ್ತು ಡಿಸಿಪಿ ನೋಡಿಕೊಳ್ಳುತ್ತಾರೆ ಎಂದರು.
ಗೃಹಸಚಿವನಾಗಿ ನಾನು ಕಾನೂನು ಬಾಹಿರವಾಗಿದ್ದರೂ ಬಿಟ್ಟುಬಿಡಿ ಎಂದು ಹೇಳಲು ಬರುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನಾತ್ಮಕವಾಗಿ ತೆಗೆದುಕೊಂಡ ಕ್ರಮಗಳನ್ನು ಸರ್ಕಾರ ಒಪ್ಪಿಕೊಳ್ಳಲಿದೆ ಎಂದು ತಿಳಿಸಿದರು.
ಪ್ರತಿಪಕ್ಷಗಳು ಪ್ರತಿಯೊಂದು ಪ್ರಕರಣಕ್ಕೂ ಎಸ್‌ಐಟಿ ರಚಿಸಿ ಸಿಬಿಐ, ಸಿಐಡಿ ತನಿಖೆ ಮಾಡಿ ಎಂದು ಹೇಳುತ್ತಿರುತ್ತಾರೆ. ಅವರು ಹೇಳಿದಂತೆಲ್ಲ ಕೇಳುತ್ತ ಕುಳಿತರೆ ನಾವು ಆಡಳಿತ ಮಾಡಲಾಗುವುದಿಲ್ಲ. ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಸಾಕಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದನ್ನೆಲ್ಲ ಅವರು ಈಡೇರಿಸಿದ್ದರೆ? ವಿರೋಧ ಪಕ್ಷದವರು ಹೇಳಿದಂತೆ ಕೇಳುತ್ತ ಕೂರಲಾಗುವುದಿಲ್ಲ. ಜನಪರ ಆಡಳಿತ ನೀಡುವುದು ನಮ್ಮ ಆದ್ಯತೆ ಎಂದು ಡಾ.ಪರಮೇಶ್ವರ ಹೇಳಿದರು.