ಭಾರಿ ಗಾಳಿ-ಮಳೆಗೆ ಬೇಲೂರು ತಾಲೂಕಿನಲ್ಲಿ ಅವಾಂತರ

27blrp4
ಶನಿವಾರ ಸಂಜೆ ಗುಡುಗು ಸಿಡಿಲು ಮಿಂಚಿನೊಂದಿಗೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ತಗರೆ ಗ್ರಾಮದ ಸಮೀಪದ ತೋಟವೊಂದರಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು.
Published on

ಬೇಲೂರು: ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಿಡಿಲು ಮಿಂಚಿನೊಂದಿಗೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ತಗರೆ ಗ್ರಾಮದ ಕುಮಾರ ಪ್ರೌಢಶಾಲೆಯ ಕಟ್ಟಡದ ತಗಡಿನ ಶೀಟು ಕಬ್ಬ್ಬಿಣದ ಸಮೇತ ಹಾರಿ ಬಿದ್ದಿದೆ. ಅಲ್ಲದೆ ಗ್ರಾಮದ ಹತ್ತಾರು ಮನೆಗಳ ಹೆಂಚುಗಳು, ಸಿಮೆಂಟ್ ಶೀಟ್‌ಗಳು. ಬೃಹತ್ ಗಾತ್ರದ ಮರಗಳು ದರೆಗುರುಳಿದ್ದು ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ತಾಲೂಕಿನಾದ್ಯಂತ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಗುಡುಗು-ಸಿಡಿಲು ಮಿಂಚಿನೊಂದಿಗೆ ಬಿರುಸಾದ ಗಾಳಿ-ಮಳೆ ಬರುತ್ತಿದೆ. ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದ ಜನರಿಗೆ ಭೂಮಿ ತಂಪಾಗಿದ್ದರಿಂದ ಬಿಸಿಲಿನ ಬೇಗೆಯಿಂದ ತುಸು ನಿರಾಳರಾಗಿದ್ದಾರೆ. ಆದರೆ ಮಳೆ ಜೋರಾಗಿ ಬರುತ್ತಿರುವುದರಿಂದ ರೈತರ ಮುಖದಲ್ಲಿ ಒಂದೆಡೆ ಮಂದಹಾಸ ಮೂಡಿದರೆ, ಮತ್ತೊಂದೆಡೆ ಗಾಳಿ ಮಳೆಗೆ ಸಿಲುಕಿ ಮನೆಗಳ ಹಾಗೂ ಕಟ್ಟಡಗಳ ಛಾವಣಿಗಳು, ಮರಗಳು, ಬೀಳುತಿದ್ದರೆ, ಇತ್ತ ವಿವಿಧ ಬೆಳೆಗಳು ಗಾಳಿ ಮಳೆಗೆ ಸುಲುಕಿ ನೆಲಕ್ಕುರುಳುತ್ತಿರುವುದರಿಂದ ಸಾರ್ವಜನಿಕರು ಆತಂಕ ಪಡುವಂತಾಗಿದೆ. ಇದರ ನಡುವೆಯೇ ಶನಿವಾರ ಸಂಜೆ ತಾಲೂಕಿನ ತಗರೆ, ಕೋಗಿಲಮನೆ ಭಾಗದ ಸಾಕಷ್ಟು ಗ್ರಾಮಗಳಲ್ಲಿ ಗುಡುಗು-ಸಿಡಿಲು, ಮಿಂಚಿನೊಂದಿಗೆ ಮಳೆ ಸುರಿದಿದೆ.

ತಾಲೂಕಿನ ತಗರೆ ಗ್ರಾಮದ ಕುಮಾರ ಪ್ರೌಢಶಾಲೆಯ ಕಟ್ಟಡದ ಮೇಲ್ಭಾಗದಲ್ಲಿ ಅಳವಡಿಸಿದ್ದ ತಗಡಿನ ಶೀಟಿನ ಛಾವಣಿ ಕಬ್ಬಿಣದ ಸಮೇತ ಹಾರಿ ಕಟ್ಟಡದ ಮುಂಭಾಗದ ಮೈದಾನಕ್ಕೆ ಬಿದ್ದರೆ, ಕೋಗಿಲ ಮನೆ ಗಡಿ ಸಮೀಪದ ಸರ್ಕಾರಿ ಪ್ರೌಢಶಾಲೆ ಮುಂಭಾಗದಲ್ಲಿದ್ದ ಬೃಹತ್ ಗಾತ್ರದ ಮರ ಹಾಗೂ ಬೇಲೂರು-ಬಿಕ್ಕೋಡು ರಸ್ತೆಯಲ್ಲಿದ್ದ ಬೃಹತ್ ಗಾತ್ರದ ಮರ ಗಾಳಿ ಮಳೆಗೆ ಸಲುಕಿ ರಸ್ತೆಗುರುಳಿ ಬಿದ್ದಿದ್ದರಿಂದ ಒಂದು ಗಂಟೆಗೂ ಹೆಚ್ಚು ಸಮಯ ವಾಹನಗಳ ಸವಾರರು ತೊಂದರೆ ಅನುಭವಿಸಿದರು. ನಂತರ ಗ್ರಾಮಸ್ಥರು ಸೇರಿ ಮರ ತೆರವುಗೊಳಿಸಿದರು. ತಗರೆ ಕುಮಾರ ಪ್ರೌಢಶಾಲೆ ಮತ್ತು ಸರ್ಕಾರಿ ಶಾಲೆಗೆ ಬೇಸಿಗೆ ರಜೆ ಇದ್ದುದ್ದರಿಂದ ಶಿಕ್ಷಕರು ಬಿಟ್ಟರೆ ಮಕ್ಕಳು ಬಾರದ ಕಾರಣ ಛಾವಣಿ ಮೈದಾನಕ್ಕೆ ಬಿದ್ದರೂ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ಆದರೆ ಇದೇ ಸಮಯದಲ್ಲಿ ತಗರೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳೂ ಬಿರುಸಾದ ಗಾಳಿ ಮಳೆಗೆ ಸಿಲುಕಿ ನೆಲಕ್ಕುರುಳಿದ್ದರಿಂದ ಈ ಭಾಗದ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವಂತಾಗಿತ್ತು. ನಂತರ ಸಂಬಂಧಪಟ್ಟವರು ವಿದ್ಯುತ್ ಸಂಪರ್ಕ ಕಲ್ಪಿಸಿದರೆ, ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಶನಿವಾರ ಸಂಜೆ ಗುಡುಗು ಸಿಡಿಲು ಮಿಂಚಿನೊಂದಿಗೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ತಗರೆ ಗ್ರಾಮದ ಕುಮಾರ ಪ್ರೌಢಶಾಲೆಯ ಕಟ್ಟಡದ ತಗಡಿನ ಶೀಟಿನ ಛಾವಣಿ ಕಬ್ಬಿಣದ ಸಮೇತ ಹಾರಿ ಬಿದ್ದಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net