6 ದಿನದಲ್ಲಿ ವಾಡಿಕೆಗಿಂತ ಅಧಿಕ ಮಳೆ; ಏಳು ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್

rain
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜ್ಯದಲ್ಲಿ ಆಶಾದಾಯಕವಾಗಿದ್ದ ಮುಂಗಾರು ಇದ್ದಕ್ಕಿದ್ದಂತೆ ಕುಂಠಿತಗೊಂಡು ಆತಂಕ ನಿರ್ವಣವಾಗಿತ್ತು. ಮೋಡ ಬಿತ್ತನೆ ಚರ್ಚೆಯೂ ಶುರುವಾಗಿತ್ತು. ಆದರೆ ಜುಲೈ ಆರಂಭವಾಗುತ್ತಿದ್ದಂತೆ ಆರಿದ್ರಾ ಮಳೆ ಅಬ್ಬರಿಸಿದ್ದು, ಆರು ದಿನದಲ್ಲಿ ವಾಡಿಕೆಗಿಂತ ಶೇ.27 ವಾಡಿಕೆಗಿಂತ ಅಧಿಕ ಮಳೆಯಾಗಿದೆ. ವಾಡಿಕೆಯಂತೆ 55 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 63 ಮಿ.ಮೀ. ಸುರಿದಿದೆ.

ಕರಾವಳಿಯಲ್ಲಿ ಶೇ.43, ದಕ್ಷಿಣ ಕರ್ನಾಟಕದಲ್ಲಿ ಶೇ.26, ಉತ್ತರ ಕರ್ನಾಟಕದಲ್ಲಿ ಶೇ.24, ಮಲೆನಾಡಲ್ಲಿ ಶೇ.7 ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿದೆ. 20 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಪ್ರಮಾಣದಲ್ಲಿ ವರ್ಷಧಾರೆಯಾದರೆ, 11 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಬಿದ್ದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ನದಿಗಳು, ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಆದರೆ, ಸಣ್ಣ ಮಳೆಗೆ ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿವೆ. ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೊಷಿಸಿದ್ದರೂ, ಶನಿವಾರ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಳವಾಗಿದ್ದು, ಶನಿವಾರ 25,556 ಕ್ಯೂಸೆಕ್ ನೀರು ಹರಿದು ಬಂದಿದೆ. ಸದ್ಯ 7.119 ಟಿಎಂಸಿ ನೀರು ಸಂಗ್ರಹವಾಗಿದೆ.

ಚಾರಣ ನಿಷೇಧ: ಪ್ರವಾಸಿಗರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗಿರಿ ತಾಣಗಳಿಗೆ ತಂಡೋಪ ತಂಡವಾಗಿ ಭೇಟಿ ನೀಡಿ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.

ಕಬಿನಿ ಭರ್ತಿಗೆ 3 ಅಡಿ ಬಾಕಿ: ಕೇರಳದ ವಯನಾಡು ಹಾಗೂ ಕಬಿನಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದ ಕಬಿನಿ ಜಲಾಶಯ ಭರ್ತಿಗೆ ಕೇವಲ 3 ಅಡಿ ಬಾಕಿ ಇದೆ. ಗರಿಷ್ಠ 2,284 ಅಡಿಗಳಷ್ಟು ನೀರಿನ ಸಂಗ್ರಹಣ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2,281.32 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 5,509 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ನದಿಗೆ 4,000 ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net