ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವರ್ಷಧಾರೆ

rain
ಶಿವಮೊಗ್ಗ ಆರ್‌ಟಿಒ ಕಚೇರಿ ರಸ್ತೆ ಪಕ್ಕದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಉಕ್ಕಿದ ಪರಿಣಾಮ ಪತ್ರಿಕಾ ಭವನದ ಆವರಣ ಕೆಲ ಕಾಲ ಜಲಾವೃತವಾಗಿತ್ತು.
Published on

ಶಿವಮೊಗ್ಗ: ವಾಯುಭಾರ ಕುಸಿತದ ಪರಿಣಾಮ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ ಮಲೆನಾಡಿನಲ್ಲೂ ಅಬ್ಬರಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ವ್ಯಾಪಕ ಮಳೆಯಾಗಿದೆ. ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಸೂರ್ಯನ ದರ್ಶನವೇ ಆಗಲಿಲ್ಲ.

ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸಾಗರ ತಾಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ನೆಲ ಹದವಾಗಿರುವುದರಿಂದ ಮುಂಗಾರಿಗೂ ಮುನ್ನವೇ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಆರಂಭವಾಗಿದೆ. ಅಡಕೆ ತೋಟಗಳಿಗೆ ಬೇಸಿಗೆ ಅಂತ್ಯಕ್ಕೆ ನೀರು ಒದಗಿಸಿದಂತಾಗಿದೆ. ಶುಂಠಿ ಬಿತ್ತನೆ ಕಾರ್ಯಕ್ಕೆ ಅನುಕೂಲಕರವಾಗಿದೆ.

ಗಾಳಿಯ ಆರ್ಭಟವಿಲ್ಲದೇ ಇರುವುದರಿಂದ ಅನಾಹುತಗಳು ಸಂಭವಿಸಿಲ್ಲ. ಆದರೆ ಮಂಗಳವಾರ ಬೆಳಗ್ಗೆ ಸುಮಾರು ಅರ್ಧ ತಾಸು ಶಿವಮೊಗ್ಗ ನಗರದಲ್ಲಿ ಸುರಿದ ಮಳೆಗೆ ನಾಗರಿಕರು ಹೈರಾಣಾದರು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಉಕ್ಕಿದ ಪರಿಣಾಮ ಕೆಲವೆಡೆ ದ್ವಿಚಕ್ರ ವಾಹನಗಳು ಅರ್ಧದಷ್ಟು ನೀರಿನಲ್ಲಿ ಮುಳುವಂತಾಯಿತು. ಪ್ರತಿ ಬಾರಿ ಮಳೆ ಬಂದಾಗಲೂ ಹೆಚ್ಚಿನ ನೀರು ನಿಲ್ಲುವ ಕಾಂಗ್ರೆಸ್ ಕಚೇರಿ ರಸೆ, ಜೈಲ್ ರಸ್ತೆ, ಆರ್‌ಟಿಒ ಕಚೇರಿ ರಸ್ತೆ ಮೇಲೆಲ್ಲಾ ನೀರು ಹರಿದು ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಯಿತು.

ಕಳೆದೊಂದು ತಿಂಗಳಿನಿಂದ ಹಲವು ಬಾರಿ ಮಳೆಯಾದ ಸಂದರ್ಭದಲ್ಲಿ ಶಿವಮೊಗ್ಗ ನಾಗರಿಕರಿಗೆ ನರಕ ದರ್ಶನವಾದರೂ ಪಾಲಿಕೆಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳದಿರುವ ಬಗ್ಗೆ ನಾಗರಿಕ ವಲದಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದೆಡೆ ಪಾಲಿಕೆ, ಅರಣ್ಯ ಇಲಾಖೆ ನಡುವಿನ ಸಮನ್ವಯದ ಕೊರತೆ ಪರಿಣಾಮ ರಸ್ತೆ ಪಕ್ಕದಲ್ಲಿನ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸುವ ಕಾರ್ಯವೂ ನಡೆದಿಲ್ಲ. ಕಳೆದ ಎರಡು ದಿನಗಳಲ್ಲಿ ಕೆಲವೆಡೆ ರೆಂಬೆಗಳು ನೆಲ್ಲಕ್ಕುರುಳಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net