

ಬೆಂಗಳೂರು: ರಾಜ್ಯದಲ್ಲಿ ಸದ್ಯ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗದಲ್ಲಿ ನ.16 ರಿಂದ ನ.19 ರವರೆಗೆ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರಿನಲ್ಲಿ ಮುಂದಿನ 24 ಗಂಟೆ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯದಲ್ಲಿ ನ.16, 17 ರಂದು ಯೆಲ್ಲೋ ಅಲರ್ಟ್ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವಾಡಿಕೆಗಿಂತ ಹೆಚ್ಚು ಮಳೆ: ರಾಜ್ಯದಲ್ಲಿ ನ.1 ರಿಂದ ನ.15 ರವರೆಗೆ ವಾಡಿಕೆಯಂತೆ 26 ಮಿಮೀ ಮಳೆಯಾಗುವ ಬದಲು ಈ ಬಾರಿ 59 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.130 ಹೆಚ್ಚು ಮಳೆ ಬಿದ್ದಿದೆ. ಆದರೆ, ಉತ್ತರ ಒಳನಾಡಿನಲ್ಲಿ ವಾಡಿಕೆಯಂತೆ 15 ಮಿಮೀ ಮಳೆಯಾಗಬೇಕಿದ್ದು, 11 ಮಿಮೀ ಮಳೆಯಾಗಿದೆ. ಹೀಗಾಗಿ ಶೇ.30ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 33 ಮಿಮೀ ಮಳೆಯಾಗುವ ಬದಲಾಗಿ 87 ಮಿಮೀ ಮಳೆಯಾಗಿದ್ದು, ಶೇ.160 ಹೆಚ್ಚು ಮಳೆಯಾಗಿದೆ. ಮುಂಗಾರು ಮಳೆ ಕೊರತೆ ಅನುಭವಿಸಿದ್ದ ಮಲೆನಾಡಲ್ಲಿ 15 ದಿನಗಳಲ್ಲಿ 33 ಮಿಮೀ ಮಳೆ ಬದಲಾಗಿ 135 ಮಿಮೀ ಮಳೆಯಾಗಿದ್ದು, ಶೇ.227ರಷ್ಟು ಹೆಚ್ಚು ಮಳೆಯಾಗಿದೆ. ಅದೇ ರೀತಿ, ಕರಾವಳಿಯಲ್ಲಿ 37 ಮಿಮೀ ಮಳೆಯಾಗಬೇಕಿತ್ತು. ಆದರೆ, 135 ಮಿಮೀ ಮಳೆಯಾಗಿದ್ದು, ಶೇ.261 ಮಿಮೀ ಹೆಚ್ಚು ಮಳೆ ಬಿದ್ದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.