

ನವದೆಹಲಿ: ದೇಶದೆಲ್ಲೆಡೆ ಹವಾಮಾನ ಬದಲಾಗಿದೆ. ಬಿಸಿಲಿನ ತಾಪದಿಂದ ಬಳಲುತ್ತಿದ್ದ ಉತ್ತರ ಭಾರತದ ಜನತೆಗೂ ಪರಿಹಾರ ಸಿಗುತ್ತಿದೆ. ಈ 20 ರಾಜ್ಯಗಳಲ್ಲಿ ಮುಂದಿನ ವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತೀವ್ರ ಶಾಖ ಮತ್ತು ಚಳಿಯಿಂದ ತತ್ತರಿಸುತ್ತಿರುವ ದೇಶದ ಜನರಿಗೆ ಇದು ಒಳ್ಳೆಯ ಸುದ್ದಿ. ಮುಂದಿನ ವಾರದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ(ಕೇಂದ್ರ ಹವಾಮಾನ ಇಲಾಖೆ) ಎಚ್ಚರಿಕೆ ನೀಡಿದೆ. ಉತ್ತರ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ನೈಋತ್ಯ ಮಾರುತಗಳ ಪ್ರಭಾವದಿಂದ ಈಗಾಗಲೇ ದೇಶದ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುತ್ತಿದ್ದು, ಮುಂದಿನ ವಾರ ದೇಶಾದ್ಯಂತ ವಿಸ್ತರಿಸಲಿದೆ. ಕೇರಳ, ಕರ್ನಾಟಕ ಮತ್ತು ಗೋವಾದಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ.
ಐಎಂಡಿ ದೇಶದ 20 ರಾಜ್ಯಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ಬಿಸಿಗಾಳಿ ಮುಂದುವರಿದರೆ, ಪಶ್ಚಿಮ ರಾಜಸ್ಥಾನ, ಉತ್ತರ ಪ್ರದೇಶದ ದಕ್ಷಿಣ ಭಾಗ, ಉತ್ತರ ಮಧ್ಯಪ್ರದೇಶ, ಹರಿಯಾಣ, ದೆಹಲಿ, ಪೂರ್ವ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಗರಿಷ್ಠ 42 ಡಿಗ್ರಿ ತಾಪಮಾನ ದಾಖಲಾಗಿದ್ದು, ತಾಪಮಾನದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಲಿದೆ. ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಮಧ್ಯಪ್ರದೇಶ, ಉತ್ತರ ಕರ್ನಾಟಕ, ಅರುಣಾಚಲ ಪ್ರದೇಶ ಮತ್ತು ಹಿಮಾಲಯ ಭಾಗದಲ್ಲಿ ಭಾರಿ ಮಳೆಯಾಗಿದೆ.
ನೈಋತ್ಯ ಮಾನ್ಸೂನ್ ಮಾರುತಗಳು ಮಹಾರಾಷ್ಟ್ರ, ಮಧ್ಯ ವಿದರ್ಭ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ತಲುಪಿವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಇವು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶದ ಕೇಂದ್ರ ಪ್ರದೇಶಗಳಿಗೆ ವಿಸ್ತರಿಸಲಿವೆ. ಇದರ ಪರಿಣಾಮ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಒಂದು ವಾರದವರೆಗೆ ಭಾರಿ ಮಳೆಯಾಗಲಿದೆ.
ಗುಜರಾತ್, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡ ಪ್ರದೇಶಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಆಂಧ್ರ, ರಾಯಲಸೀಮಾ, ಕರ್ನಾಟಕ, ಕೇರಳ, ಲಕ್ಷದ್ವೀಪ, ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗದಲ್ಲಿ ಮುಂಬರುವ ವಾರದಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.