

ಬೆಂಗಳೂರು: ಯುಗಾದಿ ಹಬ್ಬ ಆಚರಣೆ ಬೆನ್ನಲ್ಲೇ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆ ಬೀಳಲಾರಂಭಿಸಿದ್ದು, ಗುರುವಾರ ಹಾಗೂ ಶುಕ್ರವಾರದಂದು ಭಾರಿ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಕರಾವಳಿ ಹಾಗೂ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಹಗುರ ಪ್ರಮಾಣದ ಮಳೆಯಾಗಿದೆ. ಮಂಗಳವಾರವೂ ಇದೇ ವಾತಾವರಣ ಮುಂದುವರಿಯಲಿದ್ದು, ಬುಧವಾರ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ ಹಲವೆಡೆ ಸಾಧಾರಣ ಪ್ರಮಾಣದ ವರ್ಷಧಾರೆಯಾಗಲಿದೆ. ಗುರುವಾರದಿಂದ 2-3 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಯೆಲ್ಲೋ ಅಲರ್ಟ್ ಘೋಷಣೆ:
ಭಾರಿ ಮಳೆ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡು ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನಿಂದ ಕೂಡಿದ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಭಾರಿ ವರ್ಷಧಾರೆ ಕಾರಣ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಯೆಲ್ಲೋ ಅಲರ್ಟ್ ಘೋಷಣೆಯಾಗಿರುವ ಜಿಲ್ಲೆಗಳಲ್ಲಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವು ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಉಷ್ಣಾಂಶ ಇಳಿಕೆ ಸಾಧ್ಯತೆ:
ಈ ವಾರ ಭಾರಿ ಮಳೆಯಾಗಲಿರುವ ಕಾರಣ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಉಷ್ಣಾಂಶವು 3-4 ಡಿಗ್ರಿ. ಸೆಲ್ಸಿಯಸ್‌ನಷ್ಟು ಕುಸಿತ ಉಂಟಾಗಲಿದೆ. ಈ ಕುಸಿತ ಹಾಲಿ ವಾರಕ್ಕೆ ಸೀಮಿತವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.