ರಾಜ್ಯದಲ್ಲಿ ಮೇ 13ರಿಂದ 19ರವರೆಗೆ ಭಾರೀ ವರ್ಷಧಾರೆ

Vijayavani-logo
Published on

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬರ ನಿಧಾನವಾಗಿ ಬದಿಗೆ ಸರಿಯುತ್ತಿರುವಂತಿದೆ. ಸೋಮವಾರದಿಂದ (ಮೇ 13) ಐದು ದಿನಗಳ ಕಾಲ ಗುಡುಗು ಮಿಂಚಿನ ಜತೆ ಭಾರೀ ವರ್ಷಧಾರೆಯಾಗಲಿದ್ದು, ಬಿಸಿಲಿನ ಝಳ ಮತ್ತಷ್ಟು ತಗ್ಗಲಿದೆ.

ಭಾನುವಾರ ಹಳೇ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಹಲವೆಡೆ ಗುಡುಗು ಸಹಿತ ಸಾಧಾರಣ ಪ್ರಮಾಣದ ವರ್ಷಧಾರೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮಳೆಯಾಗಿಲ್ಲ. ಬೆಳಗಾವಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸತತ ಎರಡನೇ ಭಾರೀ ಮಳೆ ಸುರಿದಿದ್ದು, ಒಟ್ಟು 22 ಜಿಲ್ಲೆಗಳಲ್ಲಿ ಮಳೆಯಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.

ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ದಾವಣಗೆರೆ, ದಕ್ಷಿಣಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಕೆಲವೆಡೆ ಮಳೆಯಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಹಿಟ್ನೆಹೆಬ್ಬಾಗಿಲು ಗ್ರಾಪಂ ವ್ಯಾಪ್ತಿಯಲ್ಲಿ ಅತೀ ಹೆಚ್ಚು 97 ಮಿ.ಮೀ. ಭಾರೀ ಮಳೆಯಾಗಿದೆ. ಪುತ್ತೂರು ತಾಲೂಕಿನ ಕಲ್ಮಡ್ಕದಲ್ಲಿ 60 ಮಿ.ಮೀ., ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ನೇಸರ್ಗಿಯಲ್ಲಿ 40, ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 44, ಚಾಮರಾಮನಗರ ಜಿಲ್ಲೆಯ ಅಟ್ಟುಗುಲಿಪುರ ಗ್ರಾಪಂಲ್ಲಿ 37, ಕುಣಿಗಲ್ ತಾಲೂಕಿನ ಯಲಿಯೂರು 39 ಮಿ.ಮೀ. ಪ್ರಮಾಣದ ವರ್ಷಧಾರೆಯಾಗಿದೆ.

ರಾಜಧಾನಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಮಾತ್ರ ಮಳೆಯಾಗಿದೆ. ಆದರೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆಲವೆಡೆ ಗುಡುಗಿನಿಂದ ಕೂಡಿದ ಬಿರುಸು ಮಳೆಯಾಗಿದೆ.

ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್:

ಸೋಮವಾರ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಅಲರ್ಟ್ ಕೊಡಲಾಗಿದೆ. ಗಾಳಿಯು 40 ಕಿ.ಮೀ. ವೇಗದಲ್ಲಿ ಬೀಸಲಿದ್ದು, ಕೆಲವೆಡೆ ಬಿರುಗಾಳಿ ಸಹಿತ ಮಳೆಯಾಗಲಿರುವ ಕಾರಣ ಆಯಾ ಜಿಲ್ಲಾಡಳಿತಕ್ಕೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net