

ನವದೆಹಲಿ: ಆಂಧ್ರಪ್ರದೇಶ, ದೆಹಲಿ, ಪಶ್ಚಿಮಬಂಗಾಳ ಸೇರಿದಂತೆ ದೇಶದ ಹಲವೆಡೆ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶದ ರಾಯಲಸೀಮದಲ್ಲಿ ಆ.14ರವರೆಗೂ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ ಆ.12ರ ವರೆಗೆ 50 ಕಿ.ಮೀ. ವೇಗದಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದೂ ತಿಳಿಸಿದೆ.
ದೆಹಲಿಯಲ್ಲಿ ಶನಿವಾರ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಪಶ್ಚಿಮಬಂಗಾಳದ ದಾರ್ಜಿಲಿಂಗ್, ಕಲಿಂಪೊಂಗ್, ಜಲ್ಪಾಯಿಗುರಿ, ಅಲಿಪುರ್ದುವರ್, ಕೂಚ್ಬೇಹರ್ ಜಿಲ್ಲೆಗಳಲ್ಲಿ ಆ.13ರ ವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ.
358 ರಸ್ತೆ ಬಂದ್: ಹಿಮಾಚಲಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತ-ಪ್ರವಾಹಗಳಿಂದ 358 ರಸ್ತೆಗಳು ಬಂದ್ ಆಗಿದ್ದು, ಸಂಪರ್ಕ ಕಡಿತಗೊಂಡಿದೆ.