ಚಾಮರಾಜನಗರ : ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ಸಂಜೆ ಕೆಲಕಾಲ ಜೋರು ಮಳೆ ಸುರಿಯಿತು.
ಜಿಲ್ಲೆಯ ಚಾಮರಾಜನಗರ, ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಸಂಜೆ ವೇಳೆಯಲ್ಲಿ ಪ್ರಾರಂಭವಾದ ತುಂತುರು ಮಳೆ, ಬಳಿಕ ಅರ್ಧ ತಾಸು ಜೋರಾಗಿ ಸುರಿಯಿತು. ಕೆಲವು ಗ್ರಾಮಗಳಲ್ಲಿ ಗುಡುಗು ಸಹಿತ ಮಳೆ ಸುರಿಯಿತು.
ಜಿಲ್ಲಾ ಕೇಂದ್ರದಲ್ಲಿ ದಿಢೀರ್ ಮಳೆಯಿಂದಾಗಿ ಕೆಲಕಾಲ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಯಿತು. ನಗರದ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳ ಮುಂಭಾಗ ಜನರು ನಿಂತು ಮಳೆಯಿಂದ ರಕ್ಷಣೆ ಪಡೆದರು.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬಿಸಿಲ ಬೇಗೆ ಹೆಚ್ಚಾಗಿ ಜನರು ತತ್ತರಿಸಿ ಹೋಗಿದ್ದರು. ಸೋಮವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯ ವೇಳೆಗೆ ಸುರಿದ ಜೋರು ಮಳೆ ನೆಲಕ್ಕೆ ತಂಪೆರೆಯಿತು.