

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಬಹುತೇಕ ಕಡೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕೆಲ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನೂ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಭೀತಿ ಎದುರಾಗಿದೆ.
ದಶಕದ ಮಳೆ: ಕಲಬುರಗಿಯಲ್ಲಿ ದಶಕದಲ್ಲಿಯೇ ಅತ್ಯಧಿಕ ಮಳೆಯಾಗಿದ್ದು, ಜಿಲ್ಲೆ ತತ್ತರಿಸಿದೆ. ಚಂಡಮಾರುತ ಭೀತಿಯೂ ಎದುರಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೊಷಿಸಲಾಗಿದೆ. ಅನಗತ್ಯವಾಗಿ ಯಾರೂ ಹೊರಗಡೆ ತಿರುಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಪ್ರವಾಹದಿಂದಾಗಿ ಅಪಾಯದಲ್ಲಿ ಸಿಲುಕಿದ್ದ ಸೈನಿಕನ ಕುಟುಂಬದ ಏಳು ಜನ ಸೇರಿ 27ಕ್ಕೂ ಹೆಚ್ಚು ಜನರನ್ನು ಎನ್ಡಿಆರ್ಎಫ್ ತಂಡ ಮತ್ತು ಅಗ್ನಿಶಾಮಕ ದಳ ರಕ್ಷಿಸಿವೆ.
3 ತಾಸಿನಲ್ಲಿ 92 ಮಿಮೀ ಮಳೆ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಧ್ಯಾಹ್ನ ಮೂರು ತಾಸು ಅಂತರದಲ್ಲಿ 92 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಘಟ್ಟದ ತಪ್ಪಲು ಹಾಗೂ ಗ್ರಾಮಾಂತರ ಭಾಗದಲ್ಲಿ ದಿನವಿಡೀ ಭಾರಿ ಮಳೆ ಸುರಿದಿದೆ. ಹಲವೆಡೆ ಕಟಾವಿಗೆ ಸಿದ್ಧವಾದ ಬೆಳೆ ಗದ್ದೆಯಲ್ಲೇ ತೋಯ್ದು, ಮೊಳಕೆ ಬರಲಾರಂಭಿಸಿದೆ. ಪೈರು ನೆಲಕಚ್ಚಿರುವುದರಿಂದ ಯಾಂತ್ರಿಕವಾಗಿ ಕಟಾವು ಮಾಡುವುದೂ ಅಸಾಧ್ಯ. ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಅಡಕೆ, ರಬ್ಬರ್, ತೋಟಗಳೂ ಜಲಾವೃತವಾಗಿ ಅಪಾರ ಹಾನಿಯಾಗಿದೆ.
ಉಡುಪಿ ಜಿಲ್ಲೆಯ ಬಾಲ್ಕೂರಿನಲ್ಲಿ 359.1 ಮಿಮೀ ಮಳೆ ಬಿದ್ದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ, ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಗಳ 50 ಪ್ರದೇಶಗಳಲ್ಲಿ ಒಂದೇ ದಿನ ಹೆಚ್ಚಿನ ಮಳೆ ದಾಖಲಾಗಿದೆ. ಉಡುಪಿಯ ಕೋನಿಯಲ್ಲಿ 314 ಮಿಮೀ, ಬರ್ಸರಿನಲ್ಲಿ 238.7 ಮಿಮೀ, ದಕ್ಷಿಣ ಕನ್ನಡದ ನೀಮಾರ್ಗದಲ್ಲಿ 217.5 ಮಿಮೀ, ವೀರಮಜಲುನಲ್ಲಿ 166 ಮಿಮೀ, ಉತ್ತರ ಕನ್ನಡದ ನಾಗರಬಸ್ತಿಕೇರಿಯಲ್ಲಿ 204.2 ಮಿಮೀ, ಕಲಬುರಗಿಯ ಹಗರಗದಲ್ಲಿ 164 ಮಿಮೀ, ಔರಾದ್ನಲ್ಲಿ 152.5 ಮಿಮೀ, ಶಿವಮೊಗ್ಗದ ಶಂಕರಶಾನುಭಾಗ್ನಲ್ಲಿ 160.4 ಮಿಮೀ, ಬೀದರ್ ಜಿಲ್ಲೆಯ ಆಳಿಯಾಬಾದ್ನಲ್ಲಿ 144 ಮಿಮೀ, ಮನಳ್ಳಿಯಲ್ಲಿ 137 ಮಿಮೀ ಮಳೆ ಸುರಿದಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಾನಿ ಹೆಚ್ಚಾಗಿದೆ ಎಂದು ಪ್ರಕೃತಿ ವಿಕೋಪ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ. ಒಂಬತ್ತು ಜಿಲ್ಲೆಗಳಲ್ಲಿ 3030 ಮನೆಗಳಿಗೆ ಹಾನಿಯಾಗಿದೆ. 318 ಮನೆಗಳು ಪೂರ್ತಿ ಬಿದ್ದುಹೋಗಿವೆ.