

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಜೋರಾಗುತ್ತಿದ್ದು, ಬುಧವಾರ ಕರಾವಳಿ, ಮಲೆನಾಡು ಸೇರಿ ಹಲವು ಜಿಲ್ಲೆಗಳಲ್ಲಿ ವರ್ಷಧಾರೆಯಾಗಿದೆ. ಮುಂದಿನ ಮಂಗಳವಾರ (ಮೇ 20)ದವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಿದ್ದು, ಮುಂದಿನ 2-3 ದಿನಗಳ ಕಾಲ ಜೋರಾಗುವ ಸಾಧ್ಯತೆ ಇದೆ.
ನಾಲ್ಕು ಸೇತುವೆ ಜಲಾವೃತ: ಮಂಗಳವಾರ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಬುಧವಾರ ಬೆಳಗಾವಿ ತಾಲೂಕಿನ ಕೆಳ ಹಂತದ ನಾಲ್ಕು ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಯಕ್ಷಗಾನ ಕಲಾವಿದ ಸಾವು: ಶೃಂಗೇರಿ-ಆಗುಂಬೆ ಮಾರ್ಗದ ಅಗಸರಕೋಣೆ ಬಳಿ ಮಂಗಳವಾರ ರಾತ್ರಿ ಗಾಳಿ-ಮಳೆ ಕಾರಣಕ್ಕೆ ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದು ಸೂರಾಲು ಯಕ್ಷಗಾನ ಮೇಳದ ಕಲಾವಿದ ರಂಜಿತ್(20) ಅಸುನೀಗಿದ್ದಾರೆ. ಬೈಕ್ನಲ್ಲಿದ್ದ ಇನ್ನೊಬ್ಬ ಕಲಾವಿದ ವಿನೋದ್ರಾಜ್ಗೆ ಅಪಾಯವಾಗಿಲ್ಲ. ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಸಮೀಪದ ಕುದುರೆಮನೆಬೆಟ್ಟು ಗ್ರಾಮದ ರಂಜಿತ್ ಕೊಪ್ಪ ಸಮೀಪದ ಕವಡೇಕಟ್ಟೆಯಲ್ಲಿ ನಡೆಯಬೇಕಿದ್ದ ಸೂರಾಲು ಯಕ್ಷಗಾನ ಮೇಳದ ಪ್ರದರ್ಶನಕ್ಕೆ ಬಂದಿದ್ದರು. ಮಳೆಯಿಂದ ಪ್ರದರ್ಶನ ರದ್ದಾದ ಕಾರಣ ಬೈಕ್ನಲ್ಲಿ ಊರಿಗೆ ಹಿಂದಿರುಗುವ ವೇಳೆ ಅವಘಡ ಸಂಭವಿಸಿದೆ.