

ಶಿವಮೊಗ್ಗ: ಜಿಲ್ಲಾದ್ಯಂತ ಆರಿದ್ರಾ ಮಳೆ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೆ ಎಡೆಬಿಡದೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ, ಸಾಗರ ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ರಾತ್ರಿಯಿಡೀ ವಿಪರೀತ ಮಳೆ ಬೀಳುತ್ತಿದ್ದ ಪರಿಣಾಮ ಸುರಕ್ಷತೆ ದೃಷ್ಟಿಯಿಂದ ಆಯಾ ತಾಲೂಕಿನ ತಹಸೀಲ್ದಾರರು ರಜೆ ಘೋಷಿಸಿ ಆದೇಶಿಸಿದರು. ಕೆಲವು ತಾಲೂಕುಗಳಲ್ಲಿ ರಜೆ ಘೋಷಣೆ ಶುಕ್ರವಾರ ಬೆಳಗ್ಗೆ ತಡವಾಗಿ ನೀಡಿದ್ದರಿಂದ ಬಹಳಷ್ಟು ಮಕ್ಕಳು ಶಾಲೆ-ಕಾಲೇಜುವರೆಗೂ ಬಂದು ವಾಪಸ್ ತೆರಳಿದರು.
ಮಳೆಯಿಂದ ಹಾನಿ ಕೂಡ ಸಂಭವಿಸುತ್ತಿದ್ದು, ಹೊಸನಗರ ತಾಲೂಕಿನ ನಂಜವಳ್ಳಿ ಗ್ರಾಮದಲ್ಲಿ ಕೊಟ್ಟಿಗೆ ಗೋಡೆ ಕುಸಿದು ವೃದ್ಧೆ ಇಂದಿರಾ ಎಂಬುವರು ಗಂಭೀರ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಕ್ಕೆಲುಬು ಮುರಿದಿದ್ದು, ಉಸಿರಾಟದ ಸಮಸ್ಯೆ ಉಂಟಾಗಿತ್ತು ಎನ್ನಲಾಗಿದೆ. ಹಾಗೆಯೇ ಶಿಕಾರಿಪುರ ತಾಲೂಕಿನಲ್ಲಿ ನಾಲ್ಕು ಮನೆಗಳು ಹಾನಿಗೀಡಾಗಿವೆ.
113.56 ಮಿ.ಮೀ ಸರಾಸರಿ ಮಳೆ:
ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ 8 ಗಂಟೆವರೆಗೆ ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿದ್ದಿದೆ. ತಾಲೂಕಿನಲ್ಲಿ 114.20 ಮಿ.ಮೀ ಮಳೆ ದಾಖಲಾಗಿದೆ. ಉಳಿದಂತೆ ಸಾಗರದಲ್ಲಿ 65, ತೀರ್ಥಹಳ್ಳಿ 42.20, ಸೊರಬ 21.40, ಶಿಕಾರಿಪುರ 10.50, ಶಿವಮೊಗ್ಗ 9.10 ಹಾಗೂ ಭದ್ರಾವತಿಯಲ್ಲಿ 5.80 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಮೊದಲ ನಾಲ್ಕು ದಿನಗಳಲ್ಲೇ ಜಿಲ್ಲೆಯ ಸರಾಸರಿ ಮಳೆ ಪ್ರಮಾಣ 113.56 ಮಿ.ಮೀ.ಗೆ ಏರಿಕೆಯಾಗಿದೆ.