ಮಲೆನಾಡಲ್ಲಿ ಮುಂದುವರಿದ ವರ್ಷಧಾರೆ

Tunga dam
ತುಂಗಾ ಜಲಾಶಯದಿಂದ 42 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಿಡಲಾಗಿದೆ.
Published on

ಶಿವಮೊಗ್ಗ: ಜಿಲ್ಲಾದ್ಯಂತ ವರುಣನ ಅಬ್ಬರ ಶುಕ್ರವಾರವೂ ಮುಂದುವರಿದಿದೆ. ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದಲ್ಲಿ ವ್ಯಾಪಕವಾಗಿದ್ದರೆ, ಇನ್ನುಳಿದ ಭಾಗದಲ್ಲಿ ಕೊಂಚ ತಗ್ಗಿತ್ತು. ಆದರೂ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಿದ್ದು ಲಿಂಗನಮಕ್ಕಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟ ಕಾರಣ ಜೋಗ ಜಲಪಾತದ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನಲ್ಲಿ ಎಂದಿನಂತೆ ಮಳೆ ಎಡೆಬಿಡದೆ ಸುರಿಯುತ್ತಿದೆ. ಇದರಿಂದ ನದಿಗಳು, ಹಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ತುಂಗಾ ಮತ್ತು ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮತ್ತೊಂದೆಡೆ ಭದ್ರಾವತಿ ಸೇರಿ ಹಲವೆಡೆ ಕಾಳಜಿ ಕೇಂದ್ರಕ್ಕೆ ನೋಂದಾಯಿತರ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತಿದೆ.
ಭದ್ರಾ ಜಲಾಶಯದಿಂದ 55 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಿಟ್ಟ ಪರಿಣಾಮ ಭದ್ರಾವತಿ ಹೊಸ ಸೇತುವೆ ಮುಳುಗಡೆಯಾಗಿದೆ. ಮೂರ್ನಾಲ್ಕು ಬಡಾವಣೆಗಳು ಜಲಾವೃತಗೊಂಡಿದ್ದು ಅಲ್ಲಿದ್ದವರನ್ನು ಮೂರು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ತುಂಗಾ ಜಲಾಶಯದಿಂದ 42 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಿಡಲಾಗಿದೆ. ಇದರಿಂದ ಹೊಳೆಹೊನ್ನೂರು ಸಮೀಪದ ಕೂಡ್ಲಿಯಲ್ಲಿ ಸ್ನಾನಘಟ್ಟ ಜಲಾವೃತಗೊಂಡಿದೆ.
ಭಾರಿ ಮಳೆಯಿಂದ ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಇತ್ತೀಚೆಗೆ ಭೂ ಕುಸಿತ ಉಂಟಾಗಿದೆ. ದೇವಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲುಕೂಡಿಗೆಯ ಬೆಕ್ಕನೂರು ಗ್ರಾಮದ ಮಂಜುನಾಥ್ ಎಂಬುವರ ಮನೆ ಪಕ್ಕದಲ್ಲೇ ಗುಡ್ಡ ಕುಸಿದಿದೆ. ಶಿವಮೊಗ್ಗ-ಉಡುಪಿ ನಡುವಿನ ಮೇಗರವಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಭೂ ಕುಸಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net