ಕರಾವಳಿ, ಮಲೆನಾಡಿನಲ್ಲಿ ಮತ್ತೆ ಭಾರಿ ಮಳೆ ಎಚ್ಚರಿಕೆ

ವಿಜಯವಾಣಿ - 2024-08-15T091839.595
Published on

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮತ್ತೆ ಚುರುಕು ಪಡೆದಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾರಾಂತ್ಯದವರೆಗೆ ಉತ್ತರ ಒಳನಾಡು ಹೊರತುಪಡಿಸಿ ಉಳಿದೆಡೆ ಉತ್ತಮ ಮಳೆಯಾಗಲಿದೆ.

ಗುರುವಾರ ಹಾಗೂ ಶುಕ್ರವಾರ ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಭಾರಿ ವರ್ಷಧಾರೆಯಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಹಗುರ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಈರುಳ್ಳಿ ಬೆಳೆ ಜಲಾವೃತ: ಚಿತ್ರದುರ್ಗ, ದಾವಣಗೆರೆಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಮುಂಜಾನೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಯಿತು. ಅಗಳೇರಿ, ಬುದ್ಧನಗರ, ರೈಲ್ವೆ ನಿಲ್ದಾಣ ಸೇರಿ 45ಕ್ಕೂ ಹೆಚ್ಚು ಮನೆಗಳಿಗೆ, ಬಿ.ಡಿ.ರಸ್ತೆಯ ಐದಾರು ಅಂಗಡಿಗಳಿಗೆ ನೀರು ನುಗ್ಗಿತು. ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ, ಅಡಕೆ, ರಾಗಿ, ಈರುಳ್ಳಿ ಸೇರಿ 70 ಹೆಕ್ಟೇರ್​ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಜಗಳೂರು ತಾಲೂಕಿನಲ್ಲಿ ಅಡಕೆ, ಈರುಳ್ಳಿ, ಶೇಂಗಾ, ಮೆಕ್ಕೆಜೋಳದ ಹೊಲಗಳು ಜಲಾವೃತವಾಗಿವೆ. ಚನ್ನಗಿರಿ ತಾಲೂಕು ಮಂಗೇನಹಳ್ಳಿಯಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net