

ಶಿವಮೊಗ್ಗ: ಒಂದು ವಾರದಿಂದ ಮಂಕಾಗಿದ್ದ ಮುಂಗಾರು ಜಿಲ್ಲೆಯಲ್ಲಿ ಮತ್ತೆ ಚುರುಕಾಗಿದೆ. ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ವ್ಯಾಪಕ ಮಳೆಯಾಗಿದೆ. ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಗ್ಗೆವರೆಗೆ 100 ಮಿ.ಮೀ ಮೀರಿ ಮಳೆಯಾಗಿದೆ.
ಮಳೆ ಹಿನ್ನೆಲೆಯಲ್ಲಿ ಸಾಗರ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಗುರುವಾರ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆರಿದ್ರಾ ಮಳೆ ಅಬ್ಬರಕ್ಕೆ ಮಲೆನಾಡಿನ ತಾಲೂಕುಗಳು ನಲುಗಿ ಹೋಗಿವೆ. ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಜನರು ಮನೆಯಿಂದ ಹೊರಬರಲೂ ಸಾಧ್ಯವಾಗದಂತೆ ಮಳೆ ಸುರಿಯುತ್ತಿದೆ.
ತುಂಗಾ, ಕುಶಾವತಿ, ಮಾಲತಿ, ವರದಾ, ಶರಾವತಿ, ಶರ್ಮಣಾವತಿ, ಕುಮದ್ವತಿ, ಭದ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ವ್ಯಾಪಕ ಮಳೆ ಕಾರಣದಿಂದ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಗೆ ಬಿಡುವು ನೀಡಿದ್ದಾರೆ. ಇನ್ನೊಂದೆಡೆ ಅಡಕೆಗೆ ಎಲೆಚುಕ್ಕೆ ರೋಗದ ಆತಂಕವೂ ಹೆಚ್ಚಾಗಿದೆ.
ಒಂದೇ ದಿನ ಜಿಲ್ಲೆಯಲ್ಲಿ ಸರಾಸರಿ 55.60 ಮಿ.ಮೀ. ಮಳೆಯಾಗಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು 129.30 ಮಿ.ಮೀ ಮಳೆಯಾಗಿದೆ. ಹೊಸನಗರ 108.90, ಸಾಗರದಲ್ಲಿ 66.10 ಮಿ.ಮೀ, ಭದ್ರಾವತಿ ತಾಲೂಕಿನಲ್ಲಿ ಅತಿ ಕಡಿಮೆ 7.80 ಮಿ.ಮೀ. ಮಳೆ ಬಿದ್ದಿದ್ದು, ಶಿವಮೊಗ್ಗ 14.40, ಶಿಕಾರಿಪುರದಲ್ಲಿ 19.10 ಹಾಗೂ ಸೊರಬ ತಾಲೂಕಿನಲ್ಲಿ 43.60 ಮಿ.ಮೀ ಮಳೆಯಾಗಿದೆ.