

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯ ಹಾಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜೀವನಾಡಿ ಭದ್ರಾ ಜಲಾಶಯಕ್ಕೆ ಭರ್ಜರಿ ನೀರು ಹರಿದುಬರುತ್ತಿದೆ.
1,819 ಅಡಿ ಸಾಮರ್ಥ್ಯದ ಲಿಂಗನಮಕ್ಕಿಗೆ ಶುಕ್ರವಾರ ಬೆಳಗ್ಗೆವರೆಗೆ 41,036 ಸಾವಿರ ಕ್ಯೂಸೆಕ್ ನೀರು ಹರಿದುಬಂದಿತ್ತು. 3,760 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ಮಟ್ಟ 1,789.45 ಅಡಿಗೆ ತಲುಪಿದೆ. ಮತ್ತೊಂದೆಡೆ 186 ಅಡಿ ಸಾಮರ್ಥ್ಯದ ಭದ್ರಾ ಜಲಾಶಯಕ್ಕೆ 21,982 ಕ್ಯೂಸೆಕ್ ನೀರಿನ ಒಳಹರಿವಿದೆ. 3,394 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಜಲಾಶಯದ ಮಟ್ಟ 167.1 ಅಡಿಗೆ ತಲುಪಿದೆ.
ಪ್ರಸಕ್ತ ವರ್ಷ ಪೂರ್ವ ಮುಂಗಾರಿನಲ್ಲೇ ತುಂಗಾ ಜಲಾಶಯ ಭರ್ತಿಯಾಗಿದೆ. ಇದೀಗ ತುಂಗಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿದೆ. ಇದರಿಂದ ಜಲಾಶಯಕ್ಕೆ 56,926 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ 68,025 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಗಾಗಿ ಶಿವಮೊಗ್ಗ ನಗರದಲ್ಲಿರುವ ಕೋರ್ಪಲಯ್ಯನ ಛತ್ರದ ಬಳಿ ಮಂಟಪ ಮುಳುಗಡೆ ಆಗಿದೆ. ಭಾರಿ ಪ್ರಮಾಣದ ನೀರು ಹರಿಯುತ್ತಿರುವುದನ್ನು ಸಾರ್ವಜನಿಕರು ನಿಂತು ನೋಡುತ್ತಿದ್ದಾರೆ.