ಸಂಪಾದಕೀಯ:ಉಷ್ಣಾಘಾತದ ಸವಾಲು

3-67c5eb7367adf
Published on

ಬೇಸಿಗೆಯ ಆರಂಭದ ಹಂತದಲ್ಲೇ ಉಷ್ಣ ಅಲೆಯ ಬಗ್ಗೆ ಮತ್ತೊಂದು ಆಘಾತಕಾರಿ ಸಂಗತಿ ಬಂದಪ್ಪಳಿಸಿದೆ. ಈ ಬಾರಿ ಬೇಸಿಗೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಂದಾಜು 20-22 ದಿನಗಳ ಅವಧಿಗೆ ಉಷ್ಣ ಅಲೆ (ಹೀಟ್ ವೇವ್) ಕಾಣಿಸಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಡುಗಡೆ ಮಾಡಿರುವ 2025ರ ಬೇಸಿಗೆ ಋತುಮಾನದ ವರದಿಯಲ್ಲಿ ಹೇಳಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ದೀರ್ಘ ಅವಧಿವರೆಗೆ ಬಿಸಿಗಾಳಿ ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ದಾಖಲಾಗಲಿದೆ. ಕಾರವಾರ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಉಷ್ಣಾಂಶ 40 ಡಿ.ಸೆ. ಮೀರಿದ್ದು, ಬಿರುಬೇಸಿಗೆಯ ಮುನ್ಸೂಚನೆಯಾಗಿದೆ. ಕರಾವಳಿ ಭಾಗದಲ್ಲಿ ಈಗಲೇ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜೀವಜಲ ಆವಿಯಾಗುತ್ತಿದೆ.

ಉಷ್ಣ ಅಲೆಗಳು ಬೇಸಿಗೆಯಲ್ಲಿ ಹೆಚ್ಚು ದಿನ ಕರಾವಳಿಯನ್ನು ಕಂಗೆಡಿಸಲಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. 2019ರ ಬೇಸಿಗೆಯಲ್ಲಿ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 46.6 ಡಿ.ಸೆ. ವರದಿಯಾಗಿತ್ತು. ಅಲ್ಲದೆ, ಕಳೆದ ವರ್ಷವೂ ರಾಜ್ಯದ ಶೇಕಡ 90ರಷ್ಟು ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲಗಿದವು. ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ ಮೊದಲ ವಾರದಲ್ಲೇ ಉಷ್ಣಾಂಷ 33 ಡಿ.ಸೆ. ವರದಿಯಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಂತೂ ಉಷ್ಣ ಅಲೆಗೆ ತತ್ತರಿಸಿವೆ.

ಈ ಬೇಸಿಗೆ ಉಷ್ಣಾಘಾತದ ಜತೆಗೆ ಜಲಸಂಕಷ್ಟದ ತೀವ್ರತೆಯನ್ನೂ ಹೆಚ್ಚಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಿರ್ಜಲೀಕರಣ ಸೇರಿದಂತೆ ಆರೋಗ್ಯ ಕುರಿತಾದ ಸಮಸ್ಯೆಗಳು ಕೂಡ ಕಾಡಲಿವೆ. ಆದರೆ, ವಾಡಿಕೆಗಿಂತ 3-4 ಡಿ.ಸೆ. ಉಷ್ಣಾಂಶ ಹೆಚ್ಚುತ್ತಿರುವುದು ನಿಜಕ್ಕೂ ಗಂಭೀರವಾದ ಸಂಗತಿ. ಹಾಗಾಗಿ, ಹವಾಮಾನ ಬದಲಾವಣೆ ಮತ್ತು ಅದರ ಸವಾಲುಗಳ ಬಗ್ಗೆ ಬರೀ ಕಳವಳಪಟ್ಟರೆ ಸಾಲದು. ಉಷ್ಣಾಂಶದ ಗಣನೀಯ ಏರಿಕೆಯ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚಬೇಕು. ಬಳಿಕ ಪರಿಹಾರದ ಮಾರ್ಗಗಳನ್ನು ಅನುಷ್ಠಾನಗೊಳಿಸಬೇಕಿದೆ. ಅದು ಸರ್ಕಾರದ ಮಟ್ಟದಲ್ಲೂ ಆಗಬೇಕು.

ಉಷ್ಣಾಂಶ ಹೆಚ್ಚುತ್ತಿದ್ದಂತೆ ಕೃಷಿ ಉತ್ಪಾದಕತೆಯಲ್ಲಿ ಕುಸಿತ ಕಂಡುಬರಲಿದೆ, ಮಾನವ ಸಂಪನ್ಮೂಲದ ದುಡಿಮೆ ಸಾಮರ್ಥ್ಯ ತಗ್ಗಲಿದೆ. ಇದೆಲ್ಲದರಿಂದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದರಿಂದ ವೈಯಕ್ತಿಕ ತಲಾ ಆದಾಯಕ್ಕೂ ಹೊಡೆತ ಬೀಳಲಿದೆ. ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರಗಳು ಹೆಚ್ಚು ಬಾಧಿತವಾಗಿವೆ.

ಹೀಗಾಗಿ, ಮುಂದಿನ ಸವಾಲಿನ ದಿನಗಳನ್ನು ಎದುರಿಸಲು ಈಗಲೇ ಸಂಬಂಧಿತ ವ್ಯವಸ್ಥೆಯನ್ನು ಸನ್ನದ್ಧಗೊಳಿಸಬೇಕಿದೆ. ಕರ್ನಾಟಕ ಸೇರಿದಂತೆ ಭಾರತದಲ್ಲೂ ಇನ್ನಷ್ಟು ಸುಧಾರಣಾ ಕ್ರಮಗಳು ಕೈಗೊಳ್ಳಬೇಕಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಅಂಶಗಳ ಬಗ್ಗೆ ಸರ್ಕಾರಗಳು ಮತ್ತು ಸಾರ್ವಜನಿಕರು ಕಾಲ ಮಿಂಚಿ ಹೋಗುವ ಮುನ್ನವೇ ಗಮನ ಹರಿಸಿ, ಪರಿಹಾರ ಕ್ರಮಕ್ಕೆ ಮುಂದಾಗುವುದು ಒಳಿತು.

ಪರಿಸರಕ್ಕೆ ಆಘಾತ ಉಂಟುಮಾಡುತ್ತಿರುವ ಯೋಜನೆಗಳು ಹಾಗೂ ಇತರ ಚಟುವಟಿಕೆಗಳು ನಿಲ್ಲಿಸಲು ಇದು ಸಕಾಲ. ಜನರು ನಿಸರ್ಗಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಪರಿಸರದ ಕಳವಳ ಮತ್ತು ಪರಿಸ್ಥಿತಿಯ ಗಂಭೀರತೆಗೆ ಸ್ಪಂದನೆ ಈಗಿನ ತುರ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net