ಹಲೋ ಡಾಕ್ಟರ್​: ಹೆಣ್ಣುಮಕ್ಕಳಲ್ಲಿ ಹೃದಯಾಘಾತದ ತೀವ್ರತೆ

Sudina-2
Published on

ಎಲ್ಲ ಹೆಣ್ಣುಮಕ್ಕಳಿಗೂ ಹೃದಯಾಘಾತವಾಗುವ ಸಂಭವ ಇದ್ದೇ ಇದೆ. ಗಂಡಸರಲ್ಲಿ ಇರುವಂತಹ ಹೃದಯಾಘಾತದ ಲಕ್ಷಣಗಳು ಹೆಣ್ಣುಮಕ್ಕಳಲ್ಲಿದ್ದರೂ ಅವರು ಹೃದಯಾಘಾತದ ಲಕ್ಷಣಗಳ ತೀವ್ರತೆಯನ್ನು ಅಲಕ್ಷಿಸುವುದು ಸಾಮಾನ್ಯ.

ಎದೆನೋವು ಸಾಮಾನ್ಯ ಲಕ್ಷಣವಾಗಿದ್ದು; ಎದೆಯಲ್ಲಿ ಹಿಚುಕಿದಂತಾಗುವುದು, ಭಾರವಾಗುವುದರ ಅನುಭವವಾಗುವುದು. ಆದರೆ, ಗಂಡಸರಲ್ಲಿರುವ ನೋವಿನ ತೀವ್ರತೆ ಇಲ್ಲದಿರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಕಡಿಮೆ. ಎದೆನೋವು ಇಲ್ಲದೇ ಹೃದಯಾಘಾತವಾಗಬಹುದು. ಎದೆನೋವಿಗಿಂತ ಕುತ್ತಿಗೆ, ಕೆಳದವಡೆ, ಹೊಟ್ಟೆಯ ಮೇಲ್ಭಾಗ, ಬೆನ್ನುನೋವು - ಇವು ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು ಕಂಡುಬರುವವು.

ಎಡ ಅಥವಾ ಬಲಗೈಯಲ್ಲಿ ಮಾತ್ರ ನೋವು ಕೂಡ ಸಾಮಾನ್ಯ. ಎದೆನೋವಿನ ಪ್ರಮಾಣ ಕಡಿಮೆ ಇದ್ದರೂ, ವಾಂತಿಯ ಲಕ್ಷಣಗಳು, ಏರುಸಿರು, ತೀವ್ರತರ ಬೆವರು, ಅಜೀರ್ಣವಾದಂತೆ ಅನಿಸುವುದು ಹೆಚ್ಚಾಗಬಹುದು. ಈ ಎಲ್ಲ ಲಕ್ಷಣಗಳು ತುಸು ಬೇರೆಯೇ ಎನಿಸುವ ಕಾರಣವೆಂದರೆ - ಹೆಂಗಸರಲ್ಲಿ ದೊಡ್ಡ ಕೊರೊನರಿ ರಕ್ತನಾಳಗಳ (Main coronary arteries) ಚಿಕ್ಕ ಶಾಖೆಗಳೂ ಕೊಲೆಸ್ಟರಾಲ್ ಶೇಖರಣೆಗೆ (Cholesterol deposition) ಒಳಪಡುವವು. ಇದಕ್ಕೆ ಚಿಕ್ಕ ರಕ್ತನಾಳಗಳ ಹೃದಯಬೇನೆ (Small vessel heart disease) ಎನ್ನುವರು.

ವಿಶ್ರಾಂತಿಯಲ್ಲಿದ್ದಾಗ ಅಥವಾ ಮಲಗಿದಾಗ ಹೆಂಗಸರಲ್ಲಿ ಎದೆನೋವು ಕಂಡುಬರುವ ಸಾಧ್ಯತೆ ಹೆಚ್ಚು. ಭಾವನಾತ್ಮಕ ಒತ್ತಡ ವಿಶೇಷ ಪಾತ್ರ ವಹಿಸುತ್ತದೆ. ಈ ಎಲ್ಲ ಕಾರಣಗಳಿಂದ ಹೃದಯಾಘಾತದಿಂದ ಬರುವ ಹೆಂಗಸರು ತುರ್ತಚಿಕಿತ್ಸಾ ವಿಭಾಗದಲ್ಲಿ ಜಾಸ್ತಿ; ನಿಯಮಿತ ಆರೋಗ್ಯ ಪರೀಕ್ಷೆಗೆ ಒಳಪಡುವುದು ಕಡಿಮೆ. ಸಹಜವಾದ ಲಕ್ಷಣಗಳು ಕಡಿಮೆ ಇರುವುದರಿಂದ, ಹೃದಯಾಘಾತವನ್ನು ದೃಢಪಡಿಸುವ (Diagnosis) ಸಾಧ್ಯತೆಯೂ ತಡವಾಗುವ ಸಂಭವ ಹೆಚ್ಚು. ಅದಕ್ಕೆಂದೇ ಹೆಣ್ಣುಮಕ್ಕಳು ಹೃದಯಾಘಾತದ ಬಗ್ಗೆ ತೀವ್ರತರ ಕಾಳಜಿ ವಹಿಸುವುದು ಉತ್ತಮ. ತಡವಾಗಿ ಆಸ್ಪತ್ರೆ ತಲುಪುವುದರಿಂದ ಸಾವಿನ ಪ್ರಮಾಣ ಕೂಡ ಹೆಚ್ಚುವುದು.

ಹೃದಯಾಘಾತದ ಕಾರಣಗಳು: ಮಧುಮೇಹ, ಮಾನಸಿಕ ಒತ್ತಡ, ಖಿನ್ನತೆ(Mental stress and depression), ತಂಬಾಕು ಸೇವನೆ, ವ್ಯಾಯಾಮದ ಕೊರತೆ, ಮುಟ್ಟು ನಿಲ್ಲುವಿಕೆ, ಹೃದಯಾಘಾತದ ಕೌಟುಂಬಿಕ ಇತಿಹಾಸ (Family history of heart disease), ಬಸಿರು ಇದ್ದಾಗ ಬಿಪಿ ಅಥವಾ ಮಧುಮೇಹ - ಇವು ಹೃದಯಾಘಾತದ ಮುಖ್ಯ ಕಾರಣಗಳು. ಮುಟ್ಟು ನಿಂತ ನಂತರ ಹಿರಿಯ ಹೆಂಗಸರಲ್ಲಿ ಹೃದಯಾಘಾತದ ಸಂಭವವು ದ್ವಿಗುಣಗೊಳ್ಳುತ್ತದೆ. ಮುಟ್ಟು ಇರುವ ತನಕ, ಹಲವಾರು ವಿಶೇಷ ಹಾಮೋನುಗಳು ಹೆಂಗಸರನ್ನು ರಕ್ಷಿಸುತ್ತವೆ. ಇದು ನಿಸರ್ಗ ಇತ್ತ ವರದಾನ. ಮುಟ್ಟು ಇರುವಾಗ, ಬಸಿರು ಆಗುವುದು, ಮಕ್ಕಳನ್ನು ಜೋಪಾನ ಮಾಡುವುದು ಅನುಕೂಲವಾಗಲೆಂದು ರಕ್ಷಣೆ.

ಇತ್ತೀಚೆಗೆ ಸಿಗರೇಟು ಸೇವನೆ, ಮತ್ತೇರಿಸುವ ಮಾದಕ ಪದಾರ್ಥಗಳ ಸೇವನೆಯ ಚಟ ಜಾಸ್ತಿ ಆಗಿದ್ದು ಆತಂಕವಾಗಿದ್ದು, ಮುಟ್ಟು ಇರುವಾಗಲೇ ಹೃದಯಾಘಾತದ ಸಂಭವ (30-40 ವರ್ಷದವರಲ್ಲಿ) ಹೆಚ್ಚುತ್ತಿದೆ. ಇಂದಿನ ದಿನಮಾನದಲ್ಲಿ ಹೆಂಗಸರೂ ಆರ್ಥಿಕ ಸಹಾಯವನ್ನು ನೀಡಿ ಕುಟುಂಬದ ಜವಾಬ್ದಾರಿಯನ್ನು ವಹಿಸಬೇಕಾಗಿದೆ. ಈ ಕಾರಣಗಳಿಂದಾಗಿ ನುರಿತ ವೈದ್ಯರಿಂದ ನಿಯಮಿತ ತಪಾಸಣೆ ಅಗತ್ಯ.

ಹೆಣ್ಣುಮಕ್ಕಳಲ್ಲಿ ಹೃದಯಾಘಾತ ಸಂಭವ ಕಡಿಮೆ ಮಾಡುವ ಮಾಗೋಪಾಯಗಳು: ನಿಯಮಿತ ವ್ಯಾಯಾಮ, ಸಿಗರೇಟು ಸೇವನೆ ನಿಲ್ಲಿಸುವಿಕೆ, ತೂಕ ಕಾಯ್ದುಕೊಳ್ಳುವಿಕೆ, (maintain Healthy weight) ಸಮತೋಲ, ಕಡಿಮೆ ಕೊಬ್ಬುಯುಕ್ತ ಆಹಾರ, ಮಾನಸಿಕ ಒತ್ತಡ ಕಡಿಮೆ ಮಾಡುವಿಕೆ (Stress management) ಮತ್ತು ವೈದ್ಯರು ತಿಳಿಸಿದ ಔಷಧಗಳ ನಿಯಮಿತ ಸೇವನೆ. ಎಷ್ಟೋ ಹೆಂಗಸರು ಅಡುಗೆಮನೆ ಕೆಲಸವೇ (kitchen work) ಜಾಸ್ತಿ ಆಗಿದ್ದು ವ್ಯಾಯಾಮವು ಅಗತ್ಯವಿಲ್ಲ ಎಂಬ ತಪ್ಪು ತಿಳಿವಳಿಕೆಯಲ್ಲಿ ಇರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net