

ಬೆಂಗಳೂರು ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಮಾಡುತ್ತಿರುವ ಎಡವಟ್ಟಿನಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್)ದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ವರ್ಷದಿಂದ ಪರೀಕ್ಷೆ ಬರೆಯುತ್ತಿದ್ದರೂ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಆರ್‌ಜಿಯುಎಚ್‌ಎಸ್ ಕುಲಸಚಿವ(ಮೌಲ್ಯಮಾಪನ) ಡಾ. ರಿಯಾಜ್ ಭಾಷಾ ಅವರನ್ನು ಭೇಟಿ ಮಾಡಿ ನ್ಯಾಯ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
2018ರ ಹಿಂದೆ ಪ್ರವೇಶ ಪಡೆದಿರುವ ನೂರಾರು ವಿದ್ಯಾರ್ಥಿಗಳ ಪರಿಸ್ಥಿತಿ ಇದೇ ಆಗಿದೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು 5 ಬಾರಿ ಮೌಲ್ಯಮಾಪನಗೊಂಡಿದ್ದು, ಒಬ್ಬೊಬ್ಬ ಮೌಲ್ಯಮಾಪಕರು ವಿಭಿನ್ನವಾಗಿ ಅಂಕಗಳನ್ನು ನೀಡಿದ್ದಾರೆ. ಒಬ್ಬ ವಿದ್ಯಾರ್ಥಿಗೆ 3ನೇ ಮೌಲ್ಯಮಾಪನದಲ್ಲಿ 62 ಅಂಕ ಸಿಕ್ಕಿರುವ ವಿದ್ಯಾರ್ಥಿಗಳಿಗೆ 2ನೇ ಮೌಲ್ಯಮಾಪನದಲ್ಲಿ 5 ಅಂಕ ಸಿಕ್ಕಿದೆ. ಮತ್ತೊಂದು ವಿದ್ಯಾರ್ಥಿಯ ಉತ್ತರ ಪತ್ರಿಕೆಯಲ್ಲಿ 3ನೇ ಮೌಲ್ಯಮಾಪನದಲ್ಲಿ 56 ಅಂಕ ಸಿಕ್ಕಿದ್ದು, 2ನೇ ಮೌಲ್ಯಮಾಪನದಲ್ಲಿ 4 ಅಂಕ ಸಿಕ್ಕಿದೆ. ಇದು ಒಬ್ಬಿಬ್ಬರ ಕತೆಯಲ್ಲ. ಬಹುತೇಕ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಅಂಕಗಳು ಇದೇ ರೀತಿ ಇದೆ.
ವಿವಿಯು ಈ ಬ್ಯಾಚ್ ವಿದ್ಯಾರ್ಥಿಗಳಿಗೆ 5 ಹಂತದ ಮೌಲ್ಯಮಾಪನ ಮಾಡಿಸಿದೆ. ಇದರಲ್ಲಿ ಸರಾಸರಿ ಶೇ.50 ಅಂಕ ಬಂದಲ್ಲಿ, ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಮೌಲ್ಯಮಾಪಕರು ಕಡಿಮೆ ಅಂಕ ನೀಡುತ್ತಿರುವುದರಿಂದ ಪಾಸ್ ಆಗಲು ಸಾಧ್ಯವಾಗುತ್ತಿಲ್ಲ. ಈ ಭಾರೀ ಸಂಖ್ಯೆಯ ವ್ಯತ್ಯಾಸ ಕಂಡು ಬರಲು ಹೇಗೆ ಸಾಧ್ಯ?, ಮೌಲ್ಯಮಾಪಕರು ಅಸಡ್ಡೆಯಿಂದ ವಿದ್ಯಾರ್ಥಿಗಳು ೇಲಾಗುತ್ತಿದ್ದಾರೆ. ಪ್ರತಿ ಬಾರಿ ಪರೀಕ್ಷೆ ತೆಗೆದುಕೊಂಡರೂ ಈ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿ ಸಿಲುಕಿದೆ. ವಿವಿಯು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಮೌಲ್ಯಮಾಪನದಲ್ಲಾಗಿರುವ ತಪ್ಪುಗಳನ್ನು ವಿದ್ಯಾರ್ಥಿಗಳು ಎತ್ತಿ ಹಿಡಿದಿದ್ದಾರೆ. ಎಲ್ಲ ಮೌಲ್ಯಮಾಪಕರು ಒಂದೇ ರೀತಿಯಲ್ಲಿ ಮೌಲ್ಯಮಾಪನ ಮಾಡುವುದಿಲ್ಲ. ಹೀಗಾಗಿ ವಿಭಿನ್ನವಾಗಿ ಅಂಕಗಳು ಸಿಕ್ಕಿವೆ. ಇವರ ಸಮಸ್ಯೆಯನ್ನು ಬಗೆಹರಿಸಲು ಎನ್‌ಎಂಸಿಗೆ ಪತ್ರ ಬರೆದು ಮನವಿ ಮಾಡುತ್ತಿದ್ದೇವೆ. ಶೀಘ್ರದಲ್ಲೇ ವಿವಿಯ ನಿಯೋಗ ಎನ್‌ಎಂಸಿ ಅಧಿಕಾರಿಗಳನ್ನು ಭೇಟಿ ಮಾಡಲಿದೆ. -ಡಾ.ರಿಯಾಜ್ ಭಾಷಾ, ಮೌಲ್ಯಮಾಪನ ಕುಲಸಚಿವ ಆರ್‌ಜಿಯುಎಚ್‌ಎಸ್