ಬೇಸಿಗೆಯ ನೆಮ್ಮದಿಗೆ ಪಾಲಿಸಬೇಕಾದ ಆರೋಗ್ಯ ಸೂತ್ರ

-67cdcaf5a8328
Published on
ಬೇಸಿಗೆ ಬಂತೆಂದರೆ ನಿಶ್ಯಕ್ತಿ, ನಿದ್ರಾಹೀನತೆ, ಅಸಿಡಿಟಿ, ತಲೆನೋವಿನಂತಹ ತೊಂದರೆಗಳು ಕಾಡುತ್ತವೆ. ಆದರೆ ನಮ್ಮ ದಿನಚರಿಯನ್ನು ಚೆನ್ನಾಗಿ ಇಟ್ಟುಕೊಂಡು ಇದ್ಯಾವ ತೊಂದರೆಗಳೂ ಆಗದಂತೆ ನೋಡಿಕೊಳ್ಳಬಹುದು.

ಉಷಃಪಾನ: ರಾತ್ರಿಯ ಸಮಯದಲ್ಲಿ ಒಂದು ತಂಬಿಗೆ ನೀರನ್ನು ಕುದಿಸಲು ಇಟ್ಟು ಅದು ಕುದಿಯುತ್ತಿದ್ದಂತೆ ಎರಡು ಚಮಚ ಕೊತ್ತಂಬರಿ ಬೀಜದ ಪುಡಿ, ಒಂದು ಚಮಚ ಸೊಗದೆ ಬೇರಿನ ಪುಡಿ ಹಾಕಿ ಬೆಂಕಿಯನ್ನು ಆರಿಸಿ ಮುಚ್ಚಿಡಬೇಕು. ಬೆಳಿಗ್ಗೆ ಬೇಗ ಎದ್ದು ಒಂದು ಲೋಟದಷ್ಟು ಈ ನೀರನ್ನು ಸೇವಿಸಬೇಕು. ಇದರಿಂದ ಇಡೀ ದಿನ ತಂಪಾಗಿರಲು ಸಹಾಯವಾಗುತ್ತದೆ.

ಅಭ್ಯಂಗ: ಕೆಲವರಿಗೆ ಬೇಸಿಗೆಯಲ್ಲಿ ಕಣ್ಣುರಿ, ಗಂಟಲು ಹೊಟ್ಟೆಗಳಲ್ಲಿ ಉರಿ, ಪಾದ - ಹಸ್ತಗಳಲ್ಲಿ ಬಿಸಿ ಮತ್ತು ಉರಿಯಾಗಲು ಪ್ರಾರಂಭವಾಗುತ್ತದೆೆ. ಅದಕ್ಕೆ ಬೆಳಿಗ್ಗೆ ಬೇಗ ಎದ್ದು ತಂಪುಗುಣ ಹೊಂದಿರುವ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಮೈಕೈನೋವು, ಸುಸ್ತು ಸಾಧ್ಯತೆಗಳೂ ಕಡಿಮೆಯಾಗುತ್ತವೆ.

ಪ್ರಾಣಾಯಾಮ / ಮುದ್ರೆ: ಶೀತಲಿ, ಶೀತ್ಕಾರಿ, ಅನುಲೋಮ ವಿಲೋಮ ಮುಂತಾದ ಪ್ರಾಣಾಯಾಮಗಳನ್ನು ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ. ಹೆಬ್ಬೆರಳು ಮತ್ತು ಕಿರುಬೆರಳುಗಳ ತುದಿಗಳನ್ನು ಸೇರಿಸಿ ಮಾಡುವ ವರುಣ ಮುದ್ರೆಯನ್ನು ಮಾಡುವುದ ರಿಂದ ದೇಹದಲ್ಲಿ ಉಷ್ಣತೆ ತುಂಬಾ ಚೆನ್ನಾಗಿ ಕಡಿಮೆಯಾಗುತ್ತದೆ.

ಆಹಾರ: ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯ ಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಹಾಲು, ಬೆಣ್ಣೆ, ಬಸಳೆಸೊಪ್ಪು, ಬೂದುಗುಂಬಳಕಾಯಿ, ಹಾಲು ಗುಂಬಳಕಾಯಿ, ಒಂದೆಲಗ, ನೆಲ್ಲಿಕಾಯಿ, ಒಣದ್ರಾಕ್ಷಿ, ಮೆಂತೆಸೊಪ್ಪು, ಖರ್ಜೂರ, ಚಿಕ್ಕು (ಸಪೋಟ), ಸೀತಾಫಲ, ಖರಬೂಜ ದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಹೋದರೆ ದೇಹ ತಂಪಾಗಿ ಉರಿ, ನಿಶ್ಶಕ್ತಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ಅಪಥ್ಯ: ಉಪ್ಪು, ಹುಳಿ, ಖಾರಗಳನ್ನು ಕಡಿಮೆ ಸೇವಿಸಬೇಕು. ಬಿಸಿಲಿಗೆ ಮೈಯೊಡ್ಡುವುದು ಒಳ್ಳೆಯದಾದರೂ ಉರಿ ಬಿಸಿಲಿನ ಓಡಾಟ ಕಡಿಮೆ ಮಾಡಬೇಕು. ಮದ್ಯಪಾನ, ಗುಟ್ಖಾ, ಸಿಗರೇಟ್ ಸೇವನೆ ಯಾವ ಕಾಲಕ್ಕೂ ಸರಿಯಲ್ಲ. ಬೇಸಿಗೆಯಲ್ಲಂತೂ ಇವುಗಳಿಂದಾಗಿ ಆರೋಗ್ಯ ಇನ್ನೂ ಹಾಳಾಗುತ್ತದೆ.

ಹಿರಿಕಿರಿಯರಿಗೆ ಟಾನಿಕ್: ಬೇಸಿಗೆ ಯಲ್ಲಿ ನಿಶ್ಶಕ್ತಿಯೂ ಕಾಡುತ್ತದೆ. ಹಾಗಾಗಿ, ಖರ್ಜೂರದ ಮಿಲ್ಕ್ ಶೇಕ್ ಮಾಡಿಕೊಂಡು ಅಂದರೆ ಮೆತ್ತನೆಯ, ಕಪ್ಪು ಬಣ್ಣದ ಖರ್ಜೂರಗಳ ಬೀಜ ತೆಗೆದು ಹಾಲಿನ ಜೊತೆ ರುಬ್ಬಿ ಹಸಿವಿರುವ ಸಮಯದಲ್ಲಿ ಅಂದರೆ ಮಧ್ಯಾಹ್ನ 12 ಘಂಟೆಯ ಹೊತ್ತಿಗೆ ಸೇವಿಸಿದರೆ ವೃದ್ಧರು ಮತ್ತು ಚಿಕ್ಕಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ.

ಹೊಟ್ಟೆ ಉರಿಗೆ ಕಷಾಯ: ಒಂದು ಚಮಚದಷ್ಟು ಜ್ಯೇಷ್ಠಮಧುವಿನ ಪುಡಿಗೆ ಒಂದು ಲೋಟ ಹಾಲು ಮತ್ತು ಮೂರು ಲೋಟ ನೀರು ಹಾಕಿ ಸಣ್ಣ ಉರಿಯಲ್ಲಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಬೆಳಿಗ್ಗೆ ಅಥವಾ ಮಧ್ಯಾಹ್ನ ಆಹಾರ ಸೇವಿಸುವ ಒಂದು ಘಂಟೆ ಮೊದಲು ಸೇವಿಸಿದರೆ ಹೊಟ್ಟೆ ಉರಿ, ಅಲ್ಸರ್, ನಿದ್ರಾಹೀನತೆ, ಗಂಟಲು ಉರಿಗಳಲ್ಲಿ ತುಂಬಾ ಅನುಕೂಲವಾಗುತ್ತದೆ.

ತ್ವಚೆಯ ರಕ್ಷಣೆಗೆ ಜ್ಯೂಸ್: ಚರ್ಮವೆಲ್ಲಾ ಉರಿಯಾದಂತೆ, ಸುಟ್ಟಗಾಯದಂತೆ ಭಾಸವಾಗುತ್ತದೆ ಎಂಬುದು ಹಲವರ ಸಮಸ್ಯೆ. ಅದಕ್ಕೆ ಗರಿಕೆ ಹುಲ್ಲಿನ ಜ್ಯೂಸ್ ಮಾಡಿಕೊಂಡು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಸಹಾಯಕ. ಇದರಿಂದ ಚರ್ಮದ ಉರಿಯಷ್ಟೇ ಅಲ್ಲದೇ ಬೇಸಿಗೆಯಲ್ಲಿ ಸಹಜವಾಗಿ ಕಾಡುವ ಚರ್ಮರೋಗಗಳು, ತ್ವಚೆ ಕಪ್ಪಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.

ಬೆಳದಿಂಗಳ ಸೇವನೆ: ರಾತ್ರಿ ಮಲಗುವ ಮೊದಲು ಸ್ವಲ್ಪ ಹೊತ್ತು ಮನೆಮಂದಿಯೆಲ್ಲಾ ಕುಳಿತು ಬೆಳದಿಂಗಳ ಸೇವನೆ ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸು ತಂಪಾಗಿ ಚೆನ್ನಾಗಿ ನಿದ್ರೆ ಬರಲು ಸಹಾಯವಾಗುತ್ತದೆ.

ನಿದ್ರೆ: ರಾತ್ರಿ ಮಲಗುವ ಮೊದಲು ಕೊಬ್ಬರಿ ಎಣ್ಣೆಯನ್ನು ನೆತ್ತಿ ಮತ್ತು ಪಾದಗಳಿಗೆ ಹಚ್ಚಿ ಮಲಗಬೇಕು. ರಾತ್ರಿ ಬೇಗ ಮಲಗಿ ನಿದ್ರೆ ಮಾಡುವುದು ಒಳ್ಳೆಯದು. ಕೃಶದೇಹಿಗಳು, ಚಿಕ್ಕ ಮಕ್ಕಳು, ಹಿರಿಯರು, ದೈಹಿಕ ಶ್ರಮ ತುಂಬಾ ಹೆಚ್ಚಿರುವವರು ಮತ್ತು ರಾತ್ರಿ ಸರಿಯಾಗಿ ನಿದ್ದೆಯಾಗದವರು ಬೇಸಿಗೆಯಲ್ಲಿ ಹಗಲುನಿದ್ದೆ ಮಾಡಬಹುದು.

ಚಿಕಿತ್ಸೆ: ಮಣ್ಣಿನ ಚಿಕಿತ್ಸೆ, ನೀರಿನ ಚಿಕಿತ್ಸೆ, ಫಲೋಪವಾಸದಂತಹ ಪ್ರಕೃತಿ ಚಿಕಿತ್ಸೆಗಳನ್ನು ಮತ್ತು ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಲು ಇದು ಅತ್ಯಂತ ಸೂಕ್ತ ಸಮಯ. ಬೇಸಿಗೆ ರಜೆಯಲ್ಲಿ ಈ ಚಿಕಿತ್ಸೆಗಳ ಮೂಲಕ ದೇಹ ಶುದ್ಧಿ ಮಾಡಿಕೊಂಡರೆ ಇಡೀ ವರ್ಷ ಉಲ್ಲಾಸದಿಂದಿರಲು ಸಾಧ್ಯ.

(ಪ್ರತಿಕ್ರಿಯಿಸಿ : vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net