

ಶಿವಮೊಗ್ಗ: ಆರೋಗ್ಯವೇ ನಿಜವಾದ ಸಂಪತ್ತು. ಇದರ ಮುಂದೆ ಬೇರೆಲ್ಲ ಸಂಪತ್ತು ಗೌಣ. ಹೀಗಾಗಿ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಮಾಚೇನಹಳ್ಳಿ ವಿಜಯ್ ಟೆಕ್ನೋಕ್ರಾಟ್ಸ್ ಸಂಸ್ಥೆಯ 25ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಕಾರ್ಮಿಕರಿಗೆ ಆರೋಗ್ಯ ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು, ಸರಿಯಾದ ಆಹಾರ ಪದ್ಧತಿ ಅನುಸರಿಸುವ ಜತೆಗೆ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಕಾರ್ಮಿಕರ ಶ್ರದ್ಧೆ ಹಾಗೂ ಪ್ರಾಮಾಣಿಕ ಕೆಲಸದಿಂದ ಸಂಸ್ಥೆ ಉತ್ತಮವಾಗಿ ಬೆಳೆಯಲು ಸಾಧ್ಯವಾಗಿದೆ. ಇತ್ತೀಚೀನ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವುದು ಆಶಾದಾಯಕ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಎಂ.ರಾಜು ಮಾತನಾಡಿದರು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ದರ್ಶಿನಿ, ಎ.ಸ್ಪಂದನಾ, ಚಿನ್ಮಯ, ಸ್ವಾತಿ ಹಾಗೂ ಲಾವಣ್ಯಾ ಅವರಿಗೆ ತಲಾ 25 ಸಾವಿರ ರೂ. ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಸಂಸ್ಥೆಯ ಎಂಡಿ ಎಚ್.ಮಹೇಂದ್ರಪ್ಪ, ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಿ.ಜಿ.ಬೆನಕಪ್ಪ, ನಿರ್ದೇಶಕರಾದ ಎನ್.ರಾಮಚಂದ್ರ, ಡಿ.ಎಸ್.ಚಂದ್ರಶೇಖರ್, ಡಿ.ಬಿ.ಅಶೋಕ್, ಎಸ್.ಜಿ.ಶಾಂತಮ್ಮ, ಎಸ್.ಆರ್.ಹರ್ಷ, ಎಲ್.ಸಿದ್ದಾರ್ಥ್, ವೈ.ಪಿ.ಸುಧಾ, ಎನ್.ಜಿ.ಸುಮಾ ಇದ್ದರು.