VIDEO: ಕರೊನಾ ಸೋಂಕಿತರನ್ನು ಗುರುತಿಸಿ, ಚಿಕಿತ್ಸೆ ನೀಡಲೆಂದು ಹೋದ ವೈದ್ಯರ ಮೇಲೆ ಸ್ಥಳೀಯರಿಂದ ಕಲ್ಲು ತೂರಾಟ..

Stone Pelting
Published on

ಇಂಧೋರ್​: ಕರೊನಾ ವೈರಸ್​ ಸೋಂಕಿತರನ್ನು ಗುರುತಿಸಿ, ಆಸ್ಪತ್ರೆಗೆ ಸೇರಿಸುವ ಸಲುವಾಗಿ ತೆರಳಿದ್ದ ಆರೋಗ್ಯ ಇಲಾಖೆಯ ತಂಡದ ಮೇಲೆ ಕಲ್ಲು ತೂರಾಟ ನಡೆದಿದೆ. ಇಂಧೋರ್​ನ ತಾಟ್ ಪಟ್ಟಿ ಬಾಖಲ್​ ಎಂಬಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ.

ಕರೊನಾ ಸೋಂಕಿತರನ್ನು ಪತ್ತೆ ಹಚ್ಚಿ, ಅವರಿಗೆ ಚಿಕಿತ್ಸೆ ನೀಡುವ ಜತೆಗೆ ಉಳಿದವರನ್ನು ಕಾಪಾಡುವ ಸಲುವಾಗಿ ಮೂವರು ವೈದ್ಯರನ್ನೊಳಗೊಂಡ, ಒಟ್ಟು ಐವರು ಇರುವ ಆರೋಗ್ಯ ಇಲಾಖೆಯ ತಂಡ ಈ ಪ್ರದೇಶಕ್ಕೆ ಹೋಗಿತ್ತು. ಆದರೆ ಅಲ್ಲಿನ ಕೆಲವುಸ್ಥಳೀಯರು ವೈದ್ಯರು, ಅವರ ಜತೆಗಿದ್ದ ಆರೋಗ್ಯ ಸಿಬ್ಬಂದಿ ಮೇಲೆ ಕಲ್ಲು ತೂರಿದ್ದಾರೆ.

ಅಲ್ಲಿಗೆ ಭೇಟಿ ಕೊಟ್ಟಿದ್ದ ಮಹಿಳಾ ವೈದ್ಯರೋರ್ವರು ಘಟನೆಯನ್ನು ವಿವರಿಸಿದ್ದಾರೆ. ಸ್ಥಳಕ್ಕೆ ಹೋಗಿ ಓರ್ವ ವ್ಯಕ್ತಿಯ ಬಳಿ ಆತನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆವು. ಅಷ್ಟರಲ್ಲೇ ಆಗಮಿಸಿದ ಕೆಲವು ಜನ ಪ್ರತಿಭಟನೆ ನಡೆಸಲು ಶುರು ಮಾಡಿದರು. ಅವರೊಂದಿಗೆ ಮತ್ತೊಂದಷ್ಟು ಜನ ಸೇರಿಕೊಂಡು ನಮ್ಮೆಡೆಗೆ ಕಲ್ಲು ತೂರಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ಅಲ್ಲೇ ಸ್ವಲ್ಪ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ನಮ್ಮನ್ನು ಕಾಪಾಡಿದರು ಎಂದು ತಿಳಿಸಿದ್ದಾರೆ.

ನಮ್ಮ ವೈದ್ಯರ ತಂಡ ಜನರನ್ನು ಕರೊನಾ ವೈರಸ್​ನಿಂದ ರಕ್ಷಿಸಲು ಅಲ್ಲಿಗೆ ತೆರಳಿತ್ತು. ಆದರೆ ಸ್ಥಳೀಯರು ಅವರ ಮೇಲೆ ಕಲ್ಲು ಎಸೆದರು. ಈ ಘಟನೆ ನಡೆದಿದ್ದು ದುರದೃಷ್ಟ ಎಂದು ಇಂಧೋರ್​​ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಪ್ರವೀಣ್​ ಜಾಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಬ್ಬರು ಮಹಿಳಾ ವೈದ್ಯರು ತಹಸೀಲ್ದಾರ್​ ಅವರ ವಾಹನದಲ್ಲಿ ಅಡಗಿ ಕುಳಿತು, ಕಲ್ಲು ತೂರುವವರಿಂದ ಬಚಾವ್​ ಆಗಿದ್ದಾರೆ.

ಚತ್ರಿಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ ಮಾಡುತ್ತಿದ್ದ ಜನರು ಪೊಲೀಸ್​ ಬ್ಯಾರಿಕೇಡ್​ಗಳನ್ನು ಮುರಿದಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಇಬ್ಬರು ಮಹಿಳಾ ವೈದ್ಯರ ಕಾಲಿಗೆ ಗಾಯವಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಪೊಲೀಸರು ಅದನ್ನು ಅಲ್ಲಗಳೆದಿದ್ದಾರೆ. ಯಾರೂ ಗಾಯಗೊಂಡಿಲ್ಲ ಎಂದಿದ್ದಾರೆ.

ಸ್ಥಳೀಯ ಜನರಲ್ಲಿ ಕರೊನಾ ವೈರಸ್​ ಬಗ್ಗೆ ಸರಿಯಾಗಿ ಅರಿವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಿಕೊಂಡಿದ್ದಾರೆ. ಇದೇ ಕಾರಣಕ್ಕೆ ಹೀಗೆ ವರ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net