

ಅರಸೀಕೆರೆ ಗ್ರಾಮಾಂತರ: ಇಂದಿನ ವೇಗದ ಜೀವನಶೈಲಿಯ ಪರಿಣಾಮವಾಗಿ, ಮನುಷ್ಯರು ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದತ್ತ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ವಿವೇಕಾನಂದ ಬಿಇಡಿ ಕಾಲೇಜಿನ ಪ್ರೊ.ಜಗಮೋಹನ್ ಶ್ರೀವತ್ಸವ್ ಬೇಸರ ವ್ಯಕ್ತಪಡಿಸಿದರು.
ನಗರದ ಸುಬ್ರಹ್ಮಣ್ಯ ಬಡಾವಣೆಯಲ್ಲಿರುವ ದೀಪಾಲಿ ಧಾಮದಲ್ಲಿ, ನ್ಯೂ ಮೆಡ್ ಹೆಲ್ತ್ ಮೈಸೂರು ಹಾಗೂ ದೀಪಾಲಿ ಧಾಮ ಶಟಲ್ ಟೀಮ್ ಸಹಯೋಗದಲ್ಲಿ ಆಯೋಜಿಸಿದ್ದ ಮೆಗಾ ರಕ್ತ ಪರೀಕ್ಷೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವ್ಯವಸ್ಥಿತ ಜೀವನದ ನಡುವೆ ಸರಿಯಾದ ಆಹಾರ ಸೇವನೆಗೆ, ನಿದ್ರೆಗೂ, ವ್ಯಾಯಾಮಕ್ಕೂ ಸಮಯ ಮೀಸಲಿಡಲಾಗುತ್ತಿಲ್ಲ. ಹೆಚ್ಚು ವೇಗವಾಗಿ ಬದುಕು ಸಾಗಬೇಕೆಂಬ ನಿರಂತರ ಒತ್ತಡದ ಹಿನ್ನೆಲೆಯಲ್ಲಿ, ಬಹುತೆಕ ಜನರು ಸಾಂಪ್ರದಾಯಿಕ, ಪೌಷ್ಟಿಕ ಆಹಾರವನ್ನು ಬಿಟ್ಟು, ಸುಲಭವಾಗಿ ದೊರೆಯುವ ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್‌ಗಳ ಕಡೆಗೆ ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದರು.
ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಉಷಾ ಮಾತನಾಡುತ್ತಾ, ಅತಿ ಸುಖ ಬಯಸಿದ ಮನುಷ್ಯ ಈಗ ಶ್ರಮರಹಿತ ಜೀವನಶೈಲಿಯನ್ನೇ ಅಳವಡಿಸಿಕೊಂಡಿದ್ದಾನೆ. ಇದರಿಂದಾಗಿ ನಾನಾ ರೋಗಗಳು ವ್ಯಕ್ತಿಯ ದೈನಂದಿನ ಜೀವನಕ್ಕೆ ನುಸುಳುತ್ತಿವೆ. ದೀಪಾಲಿಧಾಮ ಶಟಲ್ ಟೀಮ್ ಇಂತಹ ಶಿಬಿರವನ್ನು ರಿಯಾಯಿತಿ ದರದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು.
ಮಾಜಿ ಯೋಧ ಅನಿಲ್ ಮಾತನಾಡಿ, ಇಂತಹ ತಪಾಸಣೆ ಶಿಬಿರಗಳು ಮನೆ ಬಾಗಿಲಿಗೆ ಸೌಲಭ್ಯ ಒದಗಿಸುತ್ತಿರುವುದು ಜನರಿಗಾಗಿ ಆಶೀರ್ವಾದ ಸ್ವರೂಪ. ಇದರ ಸದ್ಬಳಕೆಯಾಗಬೇಕು ಎಂದು ಹೇಳಿದರು.
ನ್ಯೂ ಮೆಡ್ ಹೆಲ್ತ್ ಮೈಸೂರಿನ ಪ್ರತಿನಿಧಿ ಗೋಕುಲ್ ಕೃಷ್ಣ ಮಾತನಾಡಿ, ನಮ್ಮ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರತಿಷ್ಠಿತ ಲ್ಯಾಬ್‌ಗಳನ್ನು ಹೊಂದಿದ್ದು, ಆರೋಗ್ಯ ತಪಾಸಣೆಯಲ್ಲಿ ನಿಖರತೆ ಹಾಗೂ ಸಮರ್ಥ ಸೇವೆ ನೀಡಲು ಬದ್ಧವಾಗಿದೆ. ನಮ್ಮ ಧ್ಯೇಯವೇ ಜನರ ಆರೋಗ್ಯ ಕಾಪಾಡುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ.ಮೋಹನ್‌ಕುಮಾರ್ ಚಾಲನೆ ನೀಡಿದರು. ಅವರು ಸ್ವತಃ ರಕ್ತಪರೀಕ್ಷೆಗೆ ಒಳಗಾಗಿ ಮಾದರಿಯಾದರು. ಕಾರ್ಯಕ್ರಮದಲ್ಲಿ ಬಿ.ಪರಮೇಶ್, ಹೇಮಂತ್‌ಕುಮಾರ್, ಕಿರಣ್‌ಕುಮಾರ್, ನ್ಯೂ ಮೆಡ್ ಹೆಲ್ತ್‌ನ ಮಲ್ಲಿಕಾರ್ಜುನ್, ದೀಪಾಲಿ ಧಾಮ ಶಟಲ್ ಟೀಮ್‌ನ ಕೃಷ್ಣಮೂರ್ತಿ, ಸತೀಶ್, ಹರೀಶ್, ಕೇಶವಮೂರ್ತಿ, ಮಯೂರ್ ನಾಯಕ್, ಚಂದ್ರನಾಯಕ್, ಯಲ್ಲಪ್ಪ, ಕೆಪಿಎಸ್ ವಿಶ್ವನಾಥ್, ಡಿ.ಜಿ.ಗಿರಿಗೌಡ, ಶಿವು ಪಾಟೀಲ್ ಮುಂತಾದವರು ಭಾಗವಹಿಸಿದ್ದರು.