

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಗ್ಯ ಕಾರಣಕ್ಕೆ ಜಾಮೀನು ವಿಸ್ತರಣೆಗೆ ಅರ್ಹತೆ ಹೊಂದಿಲ್ಲ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದೆ.
ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ ಕೇಜ್ರಿವಾಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು, ಕೇಜ್ರಿವಾಲ್ ಅವರ ಆರೋಗ್ಯ ಕಾರಣಕ್ಕೆ ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಚಾರವನ್ನೇನು ನಿಲ್ಲಿಸಲಿಲ್ಲ. ಹಾಗಾಗಿ ಆರೋಗ್ಯ ಕಾರಣಕ್ಕೆ ಜಾಮೀನು ಕೊಡುವುದು ಸರಿಯಲ್ಲ ಎಂದು ಹೇಳಿದರು.
ದೆಹಲಿ ಸಿಎಂ ಮನವಿ ಮೇರೆಗೆ ಇಡಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಕೇಜ್ರಿವಾಲ್ ಅವರ ಮನವಿಗೆ ಶನಿವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ತನಿಖಾ ಸಂಸ್ಥೆಗೆ ಸೂಚಿಸಿದರು. ಸಾಮಾನ್ಯ ಜಾಮೀನು ಅರ್ಜಿಯನ್ನು ಅನುಮತಿಸದಿದ್ದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಒಂದು ವಾರದವರೆಗೆ ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್ ಮಾಡಿದ ಮತ್ತೊಂದು ಮನವಿಯ ಮೇಲೆ ನ್ಯಾಯಾಧೀಶರು ಇಡಿ ಪ್ರತಿಕ್ರಿಯೆಯನ್ನು ಕೋರಿದ್ದರು.
ಕೇಜ್ರಿವಾಲ್ ಪ್ರಸ್ತುತ ಜೂನ್ 1 ರವರೆಗೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿನ ಮೇಲೆ ಹೋಗಿದ್ದಾರೆ. ದೆಹಲಿ ಸಿಎಂ ಈ ಹಿಂದೆ ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಏಳು ದಿನಗಳವರೆಗೆ ಮಧ್ಯಂತರ ಜಾಮೀನು ವಿಸ್ತರಿಸಲು ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. "ಹಠಾತ್ ತೂಕ ನಷ್ಟ ಮತ್ತು ಹೆಚ್ಚಿನ ಕೀಟೋನ್ ಮಟ್ಟಗಳು" ಗಂಭೀರ ಹೃದಯ ಕಾಯಿಲೆಗಳು ಮತ್ತು ಕ್ಯಾನ್ಸರ್ ಅನ್ನು ಸೂಚಿಸುತ್ತದೆ ಎಂದು ಕಾರಣ ಕೊಟ್ಟಿದ್ದರು.
ಕೇಜ್ರಿವಾಲ್ ಮೇ 26 ರಂದು ಸಲ್ಲಿಸಿದ ಹೊಸ ಮನವಿಯಲ್ಲಿ, ಅವರು ಜೈಲಿಗೆ ಮರಳಲು ನಿಗದಿತ ದಿನಾಂಕವಾದ ಜೂನ್ 2 ರ ಬದಲಿಗೆ ಜೂನ್ 9ಕ್ಕೆ ಮುಂದೂಡಬೇಕೆಂದು. ಜೂ.9ರಂದು ಜೈಲು ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ ಎಂದು ಹೇಳಿದ್ದರು.
ಅಬಕಾರಿ ನೀತಿ 'ಹಗರಣ'ಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅನುವು ಮಾಡಿಕೊಡಲು ಸುಪ್ರೀಂ ಕೋರ್ಟ್ ಮೇ.10 ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಏಳು ಹಂತದ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಒಂದು ದಿನದ ನಂತರ ಜೂನ್ 2 ರಂದು ಕೇಜ್ರಿವಾಲ್ ಶರಣಾಗಬೇಕು ಎಂದು ಅದು ನಿರ್ದೇಶಿಸಿತ್ತು.