

ಶಿರಸಿ: ಕಳೆದ ವರ್ಷ ಇದೇ ವೇಳೆ ತಾಲೂಕಿನ ಜನತೆಯನ್ನು ಕಂಗೆಡಿಸಿದ್ದ ಕೆಎಫ್ಡಿ ಬಗ್ಗೆ ಆರೋಗ್ಯ ಇಲಾಖೆ ಈ ವರ್ಷ ಮುಂಚಿತವಾಗಿ ಎಚ್ಚರಿಕೆ ವಹಿಸಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು, ಸೂಕ್ತ ಔಷಧ ವಿತರಣೆ ಆರಂಭಿಸಿದೆ.
ಕೆಎಫ್ಡಿ ಮೊದಲ ಪತ್ತೆಯಾಗುವುದು ಮಂಗಗಳ ಸಾಯುವಿಕೆಯಿಂದ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕಾಡಂಚಿನ ಗ್ರಾಮಗಳಿಗೆ ವೈದ್ಯಾಧಿಕಾರಿಗಳ ತಂಡ ಈಗಾಗಲೇ ತೆರಳಿದೆ. ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಹಾಯಕರು ತಮ್ಮ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಜನತೆಯೊಂದಿಗೆ ಸಭೆ ನಡೆಸಿದ್ದಾರೆ. ಮಂಗ ಸತ್ತು ಬಿದ್ದಿರುವುದನ್ನು ಕಂಡರೆ ಯಾವುದೇ ಕಾರಣಕ್ಕೂ ಅವುಗಳ ಸಮೀಪ ತೆರಳದೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸುವಂತೆ ವಿನಂತಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಮಂಗನ ಕಳೇಬರದ ಪರೀಕ್ಷೆ ನಡೆಸಲಾಗುತ್ತದೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಸ್ಥಳೀಯರು ಯಾವ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದೆ. ಈ ಕುರಿತಂತೆ ಸ್ಥಳೀಯ ಶಾಲೆಗಳಲ್ಲಿಯೂ ಮಕ್ಕಳಿಗೆ ಕೆಎಫ್ಡಿ ಗುಣ ಲಕ್ಷಣಗಳು, ಬರದಂತೆ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಇದುವರೆಗೂ 50ಕ್ಕೂ ಅಧಿಕ ಪರೀಕ್ಷೆ:
ಕಳೆದ ವರ್ಷ ರೇವಣಕಟ್ಟಾ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಕೆಎಫ್ಡಿಯಿಂದಾಗಿ ಮರಣ ಹೊಂದಿದ ಘಟನೆ ನಡೆದಿತ್ತು. ಸೋಂಕಿತ ವ್ಯಕ್ತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆದರೂ ಗುಣವಾಗದಿದ್ದಾಗ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ತೆರಳಿದ್ದರು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಆತ ಮರಣ ಹೊಂದಿದ್ದರಲ್ಲದೆ, ಅಂತಿಮ ಕ್ಷಣದಲ್ಲಿ ಕೆಎಫ್ಡಿಗೆ ಒಳಗಾಗಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಗರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯನ್ನು ಸೋಮವಾರ ನಡೆಸಿ ಕೆಎಫ್ಡಿ ಶಂಕಿತರನ್ನು ಗುರುತಿಸುವಿಕೆ, ರೋಗ ಲಕ್ಷಣಗಳ ಮಾಹಿತಿ ತಿಳಿಸುವ, ವಹಿಸಬೇಕಾದ ಎಚ್ಚರಿಕೆ ಕುರಿತು ತಿಳಿಸುವ ಕಾರ್ಯಾಗಾರವನ್ನು ನಡೆಸಿದೆ. ಇದುವರೆಗೆ ಶಂಕಿತ 50ಕ್ಕೂ ಅಧಿಕ ಜನರ ರಕ್ತವನ್ನು ಪರೀಕ್ಷೆಗೆ ಕಳಿಸಲಾಗಿತ್ತಾದರೂ ಎಲ್ಲವೂ ಕೆಎಫ್ಡಿ ಅಲ್ಲ ಎಂಬ ವರದಿ ಬಂದಿದೆ. ಆದರೆ, ಈ ವರ್ಷದ ಹವಾಮಾನಕ್ಕೆ ಕೆಎಫ್ಡಿ ಮತ್ತೆ ಮರುಕಳಿಸುವ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸತತ ನಿಗಾ ವಹಿಸಿದೆ.
ಕೆಎಫ್ಡಿ ಫ್ಲೇವಿ ವೈರಸ್ನಿಂದ ಬರುವ ಕಾಯಿಲೆ. ಈ ವೈರಾಣು ಸಾಮಾನ್ಯವಾಗಿ ಮಂಗಗಳಲ್ಲಿ ತನ್ನ ಸಂತತಿಯನ್ನು ಕಾಯ್ದಿರಿಸಿಕೊಂಡಿರುತ್ತದೆ.
ಮಂಗಗಳ ರಕ್ತ ಹೀರಿ ಬದುಕುವ ಉಣ್ಣೆಗಳಿಂದ ಈ ರೋಗ ಮನುಷ್ಯರಿಗೆ ಹರಡುತ್ತವೆ. ಕಾಯಿಲೆಗೆ ಒಳಗಾಗಿ ಸತ್ತ ಮಂಗಗಳನ್ನು ಬಿಡುವ ಈ ಉಣ್ಣೆಗಳು ಕಾಡಿಗೆ ತೆರಳಿದವರ ಮೈಗೆ ಅಂಟಿಕೊಳ್ಳುವ ಮೂಲಕ ಕಾಯಿಲೆ ಹರಡುತ್ತದೆ.
ಮನುಷ್ಯನಿಗೆ ಈ ಉಣ್ಣೆಗಳು ಕಚ್ಚಿದ ಬಳಿಕ 3ರಿಂದ 8 ದಿನಗಳಲ್ಲಿ ವೈರಾಣು ವೃದ್ಧಿಗೊಳ್ಳುತ್ತದೆ.
ತೀವ್ರ ತೆರವಾದ ತಲೆನೋವು, ಮೈಕೈ ನೋವು, ರಕ್ತಸ್ರಾವ ಮುಖ್ಯ ಲಕ್ಷಣವಾಗಿದ್ದು, ರಕ್ತಪರೀಕ್ಷೆಯಿಂದ ಕೆಎಫ್ಡಿ ದೃಢಪಡಬೇಕಾಗುತ್ತದೆ.
ಮಂಗ ಸತ್ತು ಬಿದ್ದಿದ್ದನ್ನು ಕಂಡರೆ ತಕ್ಷಣವೇ ಅರಣ್ಯ ಇಲಾಖೆ, ಆರೋಗ್ಯ ಇಲಾಖೆಗೆ ತಿಳಿಸಬೇಕು.
ಕಾಡಂಚಿನಲ್ಲಿ ಹೊಲ ತೋಟ ಇದ್ದವರು ಮೈಗೆ ಉಣ್ಣೆ ಹತ್ತದಂತೆ ಉಣ್ಣೆ ನಿವಾರಕ ಔಷಧ, ಎಣ್ಣೆ ಬಳಸಬೇಕು.
ಅನಗತ್ಯವಾಗಿ ಕಾಡುಗಳಿಗೆ ತೆರಳುವುದನ್ನು ನಿಲ್ಲಿಸಬೇಕು.
ಜ್ವರ ಅಥವಾ ಮೈ, ಕೈ ನೋವಿನ ಸಮಸ್ಯೆ ಆದಾಗ ನಿರ್ಲಕ್ಷ್ಯಿಸದೇ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಕಳೆದ ವರ್ಷ ತಾಲೂಕಿನಲ್ಲಿ ಕೆಎಫ್ಡಿ ಕಾಣಿಸಿಕೊಂಡಿತ್ತಲ್ಲದೆ, ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ 32 ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಾರ್ವಜನಿಕರಿಗೆ ಜಾಗೃತಾ ಕ್ರಮಗಳ ಬಗ್ಗೆ ತಿಳಿಸಿದ್ದೇವೆ ಅಲ್ಲದೆ, ತೀವ್ರ ನಿಗಾ ವಹಿಸಿದ್ದೇವೆ. | ಡಾ. ವಿನಾಯಕ ಭಟ್, ತಾಲೂಕು ವೈದ್ಯಾಧಿಕಾರಿ, ಶಿರಸಿ