

ಭುವನೇಶ್ವರ್: ಮುಖ್ಯಶಿಕ್ಷಕಿಯ ಅನುಪಸ್ಥಿತಿಯಲ್ಲಿ ಅವರ ಮಗ ಶಾಲೆಗೆ ಆಗಮಿಸಿ ತರಗತಿ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.
ಈ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯ ಗೋಪಾಲಪುರ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮುಖ್ಯಶಿಕ್ಷಕಿಯ ಹೆಸರನ್ನು ಮಮತಾ ದಾಸ್ ಎಂದು ಗುರುತಿಸಲಾಗಿದೆ. ಅವರ ಗೈರು ಹಾಜರಿಯ ವೇಳೆ ಅವರ ಬದಲಾಗಿ ಪುತ್ರ ತರಗತಿ ನಡೆಸಿದ್ದಾರೆ. ಈ ಪ್ರಕರಣ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ತರಗತಿಯಲ್ಲಿನ ಅವ್ಯವಸ್ಥೆಯ ಬಗ್ಗೆ ಕೇಳಿ ನಾನು ಶಾಲೆಗೆ ಹೋದೆ. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯ ಮಗ ತರಗತಿ ತೆಗೆದುಕೊಳ್ಳುತ್ತಿದ್ದನು. ನಾನು ವಿಚಾರಿಸಿದಾಗ ಶಿಕ್ಷಕಿಯೊಬ್ಬರು ರಜೆಯಲ್ಲಿರುವುದು ಕಂಡು ಬಂದಿದ್ದು, ಮುಖ್ಯೋಪಾಧ್ಯಾಯಿನಿಯು ಸಹ ಹಾಜರಿರಲಿಲ್ಲ ಎಂದು ಗ್ರಾಮಸ್ಥ ರಮಾಕಾಂತ್ ಬ್ಯಾರಿಕ್ ತಿಳಿಸಿದರು.
ಮುಖ್ಯಶಿಕ್ಷಕಿ ಏಕೆ ಬಂದಿಲ್ಲ ಎಂದು ನಾನು ಪ್ರಶ್ನೆ ಮಾಡಿದಾಗ ಅವರಿಗೆ ಬೇರೆ ಕೆಲಸ ಇರುವುದರಿಂದ ಬರಲು ಆಗಿಲ್ಲ ಎಂದು ಆಕೆಯ ಪುತ್ರ ಸಮಜಾಯಿಷಿ ನೀಡಿದರು ಎಂದು ಬ್ಯಾರಿಕ್ ಹೇಳಿದರು.
ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಮುಖ್ಯೋಪಾಧ್ಯಾಯಿನಿ, ಅಪಘಾತಕ್ಕೀಡಾದ ನಂತರ ಚಿಕಿತ್ಸೆ ಪಡೆಯುತ್ತಿರುವ ತನ್ನ ಇನ್ನೊಬ್ಬ ಮಗನ ಜೊತೆಯಲ್ಲಿದ್ದ ಕಾರಣ ತನ್ನ ಮಗನನ್ನು ಶಾಲೆ ತೆರೆಯಲು ಕಳುಹಿಸಿದ್ದೆ ಎಂದು ಹೇಳಿದರು.
ನನ್ನು ಹಿರಿಯ ಮಗ ಅಪಘಾತದಿಂದ ಗಾಯಗೊಂಡು ಭದ್ರಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾನು ಆತನೊಂದಿಗೆ ಇದ್ದೆ. ನಾನು ಶಾಲೆಗೆ ಹೋಗುವುದು ತಡವಾಗಬಹುದು ಅಂತ ನನ್ನ ಇನ್ನೊಬ್ಬ ಮಗನ ಕೈಯಲ್ಲಿ ಶಾಲೆ ತೆರೆಯಲೆಂದು ಬೀಗ ಕೊಟ್ಟು ಕಳುಹಿಸಿದ್ದೆ. ನನ್ನ ಮಗ ಯಾವುದೇ ತರಗತಿಯನ್ನು ತೆಗೆದುಕೊಂಡಿಲ್ಲ ಎಂದು ಮುಖ್ಯಶಿಕ್ಷಕಿ ಮಮತಾ ದಾಸ್ ಸಮರ್ಥನೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪ್ರಣಯ್ ನಾಯಕ್ ಮಾತನಾಡಿ, ತಪ್ಪು ಎಸಗಿರುವುದು ಸಾಬೀತಾದರೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅಲ್ಲದೆ, ಆರೋಪದ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸುವುದಾಗಿ ಹೇಳಿದರು. (ಏಜೆನ್ಸೀಸ್)