ಫಲಿತಾಂಶ ಕುಸಿದರೆ ಮುಖ್ಯಶಿಕ್ಷಕರೇ ಹೊಣೆ: ಡಿಸಿ ಎಚ್ಚರಿಕೆ

dist headmaster meeting
ಕುವೆಂಪು ರಂಗಮಂದಿರದಲ್ಲಿ ಡಿಸಿ ಡಾ. ಸೆಲ್ವಮಣಿ ಜಿಲ್ಲಾ ಪ್ರೌಢಶಾಲಾ ಮುಖ್ಯಸ್ಥರ ಸಭೆ ಉದ್ಘಾಟಿಸಿದರು. ಸ್ನೇಹಲ್ ಲೋಖಂಡೆ, ಸಿ.ಆರ್.ಪರಮೇಶ್ವರ್, ಬಿ.ಆರ್.ಬಸವರಾಜಪ್ಪ, ಎಚ್.ಆರ್.ಕೃಷ್ಣಮೂರ್ತಿ, ಪಿ.ನಾಗರಾಜ್ ಇದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಶೋಭೆ ತಂದಿಲ್ಲ. ಈ ಬಾರಿಯೂ ಫಲಿತಾಂಶದಲ್ಲಿ ಕುಸಿತ ಕಂಡುಬಂದಲ್ಲಿ ಆಯಾ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಪ್ರಾಚಾರ್ಯರನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಎಚ್ಚರಿಕೆ ನೀಡಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪ್ರೌಢಶಾಲಾ ಮುಖ್ಯಸ್ಥರ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ ಶಿವಮೊಗ್ಗ 29ನೇ ಸ್ಥಾನದಲ್ಲಿದೆ. ಇದು ಖುಷಿ ಅಥವಾ ಸಮಾಧಾನಪಡುವ ಸಂಗತಿಯಂತೂ ಅಲ್ಲ ಎಂದರು.
ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಎದುರು ನೀಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಫಲಿತಾಂಶದಲ್ಲಿ ಕುಸಿತ ಕಾಣಬಾರದು. ಫಲಿತಾಂಶ ಉತ್ತಮ ಪಡಿಸಲು ಸಾಧ್ಯವಾಗದಿದ್ದರೆ ಇಡೀ ಸಮುದಾಯದ ಮೇಲೆ ಪೆಟ್ಟು ಬೀಳಲಿದೆ. ಕಡಿಮೆ ಅಂಕ ಪಡೆದ ಮತ್ತು ಅನುತ್ತೀರ್ಣರಾದ ಮಕ್ಕಳು ಬಾಲ್ಯದಲ್ಲೇ ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರ ಪಾತ್ರ ದೊಡ್ಡದಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ಓದಿದ ಶಾಲೆಯಲ್ಲೇ ಮಕ್ಕಳು 9ನೇ ತರಗತಿಯನ್ನೂ ಕಲಿತಿರುತ್ತಾರೆ. ಅಲ್ಲಿಂದಲೇ ಮಕ್ಕಳ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಮಾಡಬೇಕು. ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ವಿಷಯಗಳ ಬಗ್ಗೆ ಅವರಿಗೆ ಹೆಚ್ಚಿನ ಒತ್ತು ನೀಡಬೇಕು. ಪರೀಕ್ಷೆಗೆ ಇನ್ನೂ 9ರಿಂದ 10 ತಿಂಗಳು ಬಾಕಿ ಇದ್ದು ಈಗಿನಿಂದಲೇ ಶ್ರಮ ಹಾಕಬೇಕು. ಕೊನೆಯ ಹಂತದಲ್ಲಿ ವಿಶೇಷ ತರಬೇತಿ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮನಸ್ಸಿದ್ದರೆ ಮಾರ್ಗ ಎಂಬಂತೆ ಈಗಿನಿಂದಲೇ ಕೆಲಸ ಮಾಡಿದರೆ ಮಾತ್ರ ಫಲಿತಾಂಶ ಉತ್ತಮ ಸ್ಥಾನಕ್ಕೇರಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಫಲಿತಾಂಶಕ್ಕೆ ಹಲವು ಕಾರಣಗಳಿವೆ. ಅವುಗಳನ್ನು ಆರಂಭಿಕ ಹಂತದಲ್ಲಿ ಶಮನ ಮಾಡಿದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ. ಶಾಲೆಗಳಲ್ಲಿ ಯಾರೋ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಪ್ರಯತ್ನಪಟ್ಟರೆ ಸಾಲದು. ಎಲ್ಲ ವಿಷಯ ಶಿಕ್ಷಕರು, ಮುಖ್ಯಶಿಕ್ಷಕರೂ ಕೈಜೋಡಿಸಿದಾಗ ಗುಣಮಟ್ಟದ ಫಲಿತಾಂಶ ಸಿಗಲಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ 2021-22ನೇ ಸಾಲಿನಲ್ಲಿ 33 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದು ಜಿಲ್ಲಾಧಿಕಾರಿಗಳು ಸಾಂಕೇತಿಕವಾಗಿ ನಾಲ್ಕು ಶಾಲೆಗಳಿಗೆ ತಲಾ 25 ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ನೀಡಿದರು. ಬಳಿಕ ಮಕ್ಕಳ ಹಕ್ಕುಗಳು, ಮಾದಕ ದ್ರವ್ಯ ಮತ್ತು ಸೈಬರ್ ಕ್ರೈಂ, ಬಾಲ್ಯ ವಿವಾಹ, ಪೋಕ್ಸೊ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಶೇಷ ಉಪನ್ಯಾಸ ನೀಡಿದರು. ಡಿಡಿಪಿಐ ಸಿ.ಆರ್.ಪರಮೇಶ್ವರ, ಬಿಇಒಗಳಾದ ಹೊಸನಗರದ ಎಚ್.ಆರ್.ಕೃಷ್ಣಮೂರ್ತಿ, ಶಿವಮೊಗ್ಗದ ಪಿ.ನಾಗರಾಜ್, ವಿಷಯ ಪರಿವೀಕ್ಷಕರಾದ ಎಂ.ಶಿವನಗೌಡ, ಎಂ.ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net